ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಗಡಿ ವಿವಾದ ಕುರಿತು ಮುಂದಿನ ವಾರ ನಿರ್ಣಯ– ಶಂಭುರಾಜ್ ದೇಸಾಯಿ

ಕರ್ನಾಟಕಕ್ಕಿಂತ 10 ಪಟ್ಟು ಪರಿಣಾಮಕಾರಿ ನಿರ್ಣಯ–ಶಂಭುರಾಜ್ ದೇಸಾಯಿ
Last Updated 23 ಡಿಸೆಂಬರ್ 2022, 11:08 IST
ಅಕ್ಷರ ಗಾತ್ರ

ನಾಗ್ಪುರ: ‘ಕರ್ನಾಟಕದೊಂದಿಗಿನ ಗಡಿ ಸಮಸ್ಯೆ ಕುರಿತಂತೆ ಮಹಾರಾಷ್ಟ್ರ ಸರ್ಕಾರವು ಮುಂದಿನ ವಾರ ನಿರ್ಣಯವೊಂದನ್ನು ಅಂಗೀಕರಿಸಲಿದ್ದು, ಅದು ಕರ್ನಾಟಕ ಸರ್ಕಾರದ ನಿರ್ಣಯಕ್ಕಿಂತಲೂ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ’ ಎಂದುಮಹಾರಾಷ್ಟ್ರ-ಕರ್ನಾಟಕ ಗಡಿ ಸಮನ್ವಯ ಸಮಿತಿಯ ಸದಸ್ಯ ಹಾಗೂ ಅಬಕಾರಿ ಸಚಿವ ಶಂಭುರಾಜ್ ದೇಸಾಯಿ ಶುಕ್ರವಾರ ಹೇಳಿದ್ದಾರೆ.

ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಮವಾರ ರಾಜ್ಯ ವಿಧಾನಮಂಡಲದಲ್ಲಿ ವಿವರವಾದ ನಿರ್ಣಯ ಅಂಗೀಕರಿಸಲಾಗುವುದು. ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ ಬಳಿಕವೂ, ಕರ್ನಾಟಕದ ಮುಖ್ಯಮಂತ್ರಿ ಅವರು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಗೌರವಿಸಲಿಲ್ಲ ಎಂಬುದನ್ನು ಹೇಳಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ.

‌‘ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಯಸುತ್ತಾರೆ. ಸೋಮವಾರ ಅಂಗೀಕರಿಸಲಾಗುವ ನಿರ್ಣಯವು ಮಹಾರಾಷ್ಟ್ರದ ಪರವಾಗಿ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಮರಾಠಿ ಜನರ ಹಿತಾಸಕ್ತಿಯನ್ನು ಹೊಂದಿರಲಿದೆ’ ಎಂದು ಹೇಳಿದ್ದಾರೆ.

‘ನಿರ್ಣಯವನ್ನು ಅಂಗೀಕರಿಸಿದ ಬಳಿಕ, ಮಹಾರಾಷ್ಟ್ರದ ನಾಯಕರನ್ನು ಕರ್ನಾಟಕಕ್ಕೆ ಪ್ರವೇಶಿಸದಂತೆ ತಡೆದಿರುವ ಬಗ್ಗೆ ನಮ್ಮ ತೀವ್ರ ಅಸಮಾಧಾನವನ್ನು ನಾವು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇವೆ’ ಎಂದೂ ದೇಸಾಯಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರವು,ಮಹಾರಾಷ್ಟ್ರದ ಗಡಿಯಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಮತ್ತು ಆ ರಾಜ್ಯಕ್ಕೆ ಒಂದಿಂಚೂ ಭೂಮಿ ಬಿಟ್ಟುಕೊಡದಂತೆ ಗುರುವಾರ, ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.

ಮಹಾರಾಷ್ಟ್ರವು ಹುಟ್ಟುಹಾಕಿರುವ ಗಡಿ ವಿವಾದವನ್ನು ಖಂಡಿಸಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT