ಶನಿವಾರ, ಮೇ 21, 2022
28 °C
ನೀಟ್‌–ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ಪ್ರತಿಭಟನೆ

ಮುಷ್ಕರ ಹಿಂಪಡೆಯಲು ಸ್ಥಾನಿಕ ವೈದ್ಯರಿಗೆ ಸಚಿವ ಮಾಂಡವೀಯ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಕೌನ್ಸೆಲಿಂಗ್‌ (ನೀಟ್‌–ಪಿಜಿ ಕೌನ್ಸೆಲಿಂಗ್) ವಿಳಂಬವಾಗುತ್ತಿರುವುದನ್ನು ಖಂಡಿಸಿ ಮುಷ್ಕರ ನಡೆಸುತ್ತಿರುವ ಸ್ಥಾನಿಕ ವೈದ್ಯರುಗಳ ನಿಯೋಗದ ಜೊತೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ಮಾತುಕತೆ ನಡೆಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟದ (ಎಫ್‌ಒಆರ್‌ಡಿಎ) ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ‘ಈ ವಿಷಯದ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ವರದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಕೌನ್ಸೆಲಿಂಗ್‌ ನಡೆಸಲು ನಮಗೆ ಸಾಧ್ಯವಿಲ್ಲ. ಜನವರಿ 6ರಂದು ನಿಗದಿಯಾಗಿರುವ ವಿಚಾರಣೆಗೂ ಮುನ್ನ ಸರ್ಕಾರವು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಲಿದೆ. ಶೀಘ್ರ ಸಮಸ್ಯೆ ಪರಿಹರಿಸಿ ಕೌನ್ಸೆಲಿಂಗ್‌ ಆರಂಭಿಸಲು ಅನುವು ಮಾಡಿಕೊಡಬೇಕೆಂದೂ ಮನವಿ ಮಾಡಲಿದ್ದೇವೆ’ ಎಂದೂ ಸಚಿವರು ತಿಳಿಸಿದ್ದಾರೆ.

ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಸ್ಥಾನಿಕ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಮಾಡಿರುವ ಕೆಲಸಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರತಿಭಟನೆ– ಪೊಲೀಸರ ನಿಯೋಜನೆ: ಕೌನ್ಸೆಲಿಂಗ್ ವಿಳಂಬವಾಗುತ್ತಿರುವುದನ್ನು ಖಂಡಿಸಿ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯ ಮುಂದೆ ಮಂಗಳವಾರ ಭಾರಿ ಸಂಖ್ಯೆಯಲ್ಲಿ ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು