ಕೋಲ್ಕತ್ತ: ಇಲ್ಲಿನ ತಿಲಜಾಲಾ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯೊಬ್ಬಳ ಮೇಲೆ ಪಕ್ಕದ ಮನೆಯಾತ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ, ಸ್ಥಳೀಯರು ರಸ್ತೆ ಮತ್ತು ರೈಲು ತಡೆ ನಡೆಸಿ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಕುಸ್ಟಿಯಾದ ಶ್ರೀಧರ್ ರಾಯ್ ರಸ್ತೆ ನಿವಾಸಿಯಾಗಿರುವ ಬಾಲಕಿಯು ಭಾನುವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದಳು. ವ್ಯಾಪಕ ಹುಡುಕಾಟದ ನಂತರ ಇಲ್ಲಿನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಬಾಲಕಿಯ ಶವವನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಫ್ಲ್ಯಾಟ್ ಮಾಲೀಕನನ್ನು ಬಂಧಿಸಿ, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಕಾಣೆಯಾದ ಬಾಲಕಿಯನ್ನು ಹುಡುಕುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ತಿಲಜಾಲ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ ಸ್ಥಳೀಯರು. ಆ ಪ್ರದೇಶದಲ್ಲಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಸ್ಥಳೀಯರು ಸೋಮವಾರ ಬೆಳಿಗ್ಗೆ ತಿಲಜಾಲಾ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದರು. ಮಧ್ಯಾಹ್ನ ಸ್ಥಳೀಯರು ರಸ್ತೆತಡೆ ನಡೆಸಿ, ರೈಲು ಸೇವೆಗಳಿಗೆ ಅಡ್ಡಿಪಡಿಸಿದರು. ಇದೇ ವೇಳೆ ಮೂರು ಪೊಲೀಸ್ ವಾಹನಗಳನ್ನೂ ಧ್ವಂಸಗೊಳಿಸಿದ್ದು, ಒಂದು ವಾಹನವನ್ನು ಸುಟ್ಟುಹಾಕಿದ್ದಾರೆ. ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ತೆರಳಿದಾಗ ಸ್ಥಳೀಯರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.