ಶುಕ್ರವಾರ, ಮಾರ್ಚ್ 31, 2023
22 °C

ಮಿಷನ್‌ 2022 ಗುರಿ: ರಥಯಾತ್ರೆ ಆರಂಭಿಸಿದ ಅಖಿಲೇಶ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಾನ್ಪುರ/ಮಥುರಾ (ಪಿಟಿಐ): ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ‘ಮಿಷನ್‌ 2022’ ಗುರಿ ಸಾಧನೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಇಲ್ಲಿ ‘ರಥಯಾತ್ರೆ’ ಆರಂಭಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಈಗಾಗಲೇ ‘ರೈತರನ್ನು ಹತ್ತಿಕ್ಕಿದೆ’. ಮರಳಿ ಅಧಿಕಾರಕ್ಕೆ ಬಂದರೆ ‘ಸಂವಿಧಾನವನ್ನೂ ಹತ್ತಿಕ್ಕಲಿದೆ’ ಎಂದು ಹೇಳಿದರು.

ಉತ್ತರ ಪ್ರದೇಶದ ಕಾನ್ಪುರದಿಂದ ಅಖಿಲೇಶ್‌ ಯಾದವ್‌ ಆರಂಭಿಸಿದ ‘ಸಮಾಜವಾದಿ ವಿಜಯ್‌ ರಥಯಾತ್ರೆ’ಯು 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಚುನಾವಣೆಯ ಪೂರ್ವದಲ್ಲಿ ಸಂಚರಿಸಲಿದೆ.

ಯಾತ್ರೆಗೆ ಚಾಲನೆ ನೀಡುವ ಮುನ್ನ ಅಖಿಲೇಶ್‌ ತಮ್ಮ ತಂದೆ ಮುಲಾಯಂ ಸಿಂಗ್ ಆಶೀರ್ವಾದ ಪಡೆದರು. ನೋಟು ರದ್ದತಿ ಸಂದರ್ಭದಲ್ಲಿ ಬ್ಯಾಂಕ್‌ನ ಹೊರಗೆ ತಾಯಿ ಸಾಲಿನಲ್ಲಿ ನಿಂತಿದ್ದಾಗ ಜನಿಸಿದ್ದ ಬಾಲಕಿ ‘ಖಜಾಂಚಿ’ಯು ಯಾತ್ರೆಗೆ ಚಾಲನೆ ನೀಡಿದಳು. ಮರ್ಸಿಡಿಸ್‌ ಬಸ್‌ಗೆ ರಥದ ಸ್ವರೂಪವನ್ನು ನೀಡಲಾಗಿದೆ.

ಮುಲಾಯಂ ಸಿಂಗ್ ಅವರ ಚಿತ್ರದ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್, ಆಚಾರ್ಯ ನರೇಂದ್ರ ದೇವಾ, ರಾಮಮನೋಹರ ಲೋಹಿಯಾ, ಜಯಪ್ರಕಾಶ್‌ ನಾರಾಯಣ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಪಕ್ಷದ ಹಿರಿಯ ನಾಯಕರಾದ ಜನೇಶ್ವರ ಮಿಶ್ರಾ, ಬಂಧನದಲ್ಲಿರುವ ಸಂಸದ ಅಜಂ ಖಾನ್‌ ಚಿತ್ರ ಹೊಂದಿದೆ.

ಯಾತ್ರೆಯು ಕಾನ್ಪುರ, ಕಾನ್ಪರ ದೆಹತ್‌, ಹಮಿರ್‌ಪುರ, ಜಲೌನ್‌ಗೆ ಮೊದಲ ಹಂತದಲ್ಲಿ ತೆರಳಲಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಹತ್ತಿಕ್ಕುವ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಜನತೆ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಿದ್ದು, ಪೂರ್ಣ ಬಹುಮತದಿಂದ ಪಕ್ಷ ಸರ್ಕಾರ ರಚಿಸುವ ವಿಶ್ವಾಸವಿದೆ. ತಂದೆ ಮುಲಾಯಂ ಸಿಂಗ್ ಅವರೂ ಕಾನ್ಪುರದಿಂದ ರಥಯಾತ್ರೆ ಆರಂಭಿಸಿದ್ದರು. ತಾವು ಆ ಸಂಪ್ರದಾಯ ಮುಂದುವರಿಸುತ್ತಿರುವುದಾಗಿ ಹೇಳಿದರು.

ಇನ್ನೊಂದೆಡೆ, ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ, ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್‌ ಯಾದವ್‌ ಅವರು, ಮಥುರಾದಿಂದ ಸಾಮಾಜಿಕ ಪರಿವರ್ತನಾ ಯಾತ್ರೆಯನ್ನು ಸೋಮವಾರ ಆರಂಭಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು