ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕನ್ ಹಂದಿ ಜ್ವರ: ಮಿಜೋರಾಂನಲ್ಲಿ 25,000 ಹಂದಿಗಳ ಸಾವು, ₹ 121 ಕೋಟಿ ನಷ್ಟ

Last Updated 29 ಆಗಸ್ಟ್ 2021, 17:11 IST
ಅಕ್ಷರ ಗಾತ್ರ

ಐಜ್ವಾಲ್: ಮಿಜೋರಾಂನಲ್ಲಿ ಮಾರ್ಚ್ ಅಂತ್ಯದಿಂದ ಇಲ್ಲಿಯವರೆಗೆ ಐದು ತಿಂಗಳ ಅಂತರದಲ್ಲಿ 25,000 ಕ್ಕೂ ಹೆಚ್ಚು ಹಂದಿಗಳು ಆಫ್ರಿಕನ್ ಹಂದಿ ಜ್ವರದಿಂದ (ಎಎಸ್‌ಎಫ್) ಸಾವಿಗೀಡಾಗಿವೆ. ಇದರಿಂದಾಗಿ ₹ 121 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ವಿಭಾಗದ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.

ರೋಗವು ಮತ್ತಷ್ಟು ಹರಡುವುದನ್ನು ತಪ್ಪಿಸಲು ಈವರೆಗೆ ಒಟ್ಟಾರೆಯಾಗಿ 9,458 ಹಂದಿಗಳನ್ನು ಕೊಲ್ಲಲಾಗಿದೆ.

'11 ಜಿಲ್ಲೆಗಳ ಕನಿಷ್ಠ 239 ಗ್ರಾಮಗಳು ಅಥವಾ ಪ್ರದೇಶಗಳಲ್ಲಿ ಸದ್ಯ ಆಫ್ರಿಕನ್ ಹಂದಿ ಜ್ವರ ವ್ಯಾಪಿಸಿದೆ. ಇದರಿಂದಾಗಿ ₹ 121.49 ಕೋಟಿ ನಷ್ಟ ಉಂಟಾಗಿದೆ' ಎಂದು ಇಲಾಖೆಯ (ಜಾನುವಾರು ಆರೋಗ್ಯ) ಜಂಟಿ ನಿರ್ದೇಶಕ ಡಾ. ಲಾಲ್‌ಹ್ಮಿಂಗ್‌ಥಂಗಾ ತಿಳಿಸಿದ್ದಾರೆ.

ಭಾನುವಾರ 130 ಹಂದಿಗಳು ಈ ರೋಗಕ್ಕೆ ಬಲಿಯಾಗಿದ್ದು, ಸಾವಿನ ಸಂಖ್ಯೆ 25,256ಕ್ಕೆ ತಲುಪಿದೆ. ಇವುಗಳ ನಷ್ಟ ₹ 88.39 ಕೋಟಿ ಆಗಿದ್ದರೆ, ಸಾಯಿಸಿದ ಹಂದಿಗಳ ಬೆಲೆ ₹ 33.10 ಕೋಟಿಯಾಗಿದೆ. ಈ ನಷ್ಟವು ಕೇವಲ ಅಂದಾಜಾಗಿದ್ದು, ನಷ್ಟದ ಪ್ರಮಾಣ ಹೆಚ್ಚಿರಬಹುದು ಎಂದು ತಿಳಿಸಿದ್ದಾರೆ.

ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಮೇಘಾಲಯದಂತಹ ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಂಡ ಹಂದಿಗಳು ಅಥವಾ ಹಂದಿ ಮಾಂಸದಿಂದ ಆಫ್ರಿಕನ್ ಹಂದಿ ಜ್ವರ ಬಂದಿರಬಹುದು ಎಂದು ನಂಬಲಾಗಿದೆ. ಎಎಸ್ಎಫ್‌ನಿಂದ ಮಾನವನ ಆರೋಗ್ಯಕ್ಕೆ ಅಪಾಯವಿಲ್ಲ ಮತ್ತು ಹಂದಿಗಳಿಂದ ಮನುಷ್ಯರಿಗೆ ಜ್ವರ ಹರಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಬಾಂಗ್ಲಾದೇಶದ ಗಡಿಯ ಬಳಿಯ ದಕ್ಷಿಣ ಮಿಜೋರಾಂನ ಲುಂಗ್ಲೆ ಜಿಲ್ಲೆಯ ಲುಂಗ್‌ಸೆನ್ ಗ್ರಾಮದಲ್ಲಿ ಮಾರ್ಚ್ 21 ರಂದು ಶಂಕಿತ ಎಎಸ್‌ಎಫ್ ಪ್ರಕರಣ ವರದಿಯಾಗಿದ್ದವು. ನಂತರ ಏಪ್ರಿಲ್ ಮಧ್ಯದಲ್ಲಿ, ಭೋಪಾಲ್‌ನ ರಾಷ್ಟ್ರೀಯ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ ಹಂದಿಗಳ ಸಾವಿಗೆ ಎಎಸ್‌ಎಫ್ ಕಾರಣ ಎಂದು ದೃಢಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT