ಗುರುವಾರ , ಅಕ್ಟೋಬರ್ 6, 2022
27 °C
ಹಿಂದೂಗಳಿಗೆ ‘ಕಾಫಿರ್‌’, ಮುಸ್ಲಿಮರಿಗೆ ‘ಜಿಹಾದಿ’ ಅನ್ನಬೇಡಿ

ಇಮಾಮ್‌ ಸಂಘಟನೆ ಮುಖ್ಯಸ್ಥರ ಜೊತೆ ಮೋಹನ್ ಭಾಗವತ್ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವೆದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಸಂಘದ ಹಿರಿಯ ಕಾರ್ಯ ನಿರ್ವಾಹಕರೊಂದಿಗೆ ಗುರುವಾರ ಇಲ್ಲಿನ ಮಸೀದಿಯಲ್ಲಿ ಅಖಿಲ ಭಾರತ ಇಮಾಮ್‌ ಸಂಘಟನೆಯ ಮುಖ್ಯಸ್ಥ ಉಮರ್‌ ಅಹ್ಮದ್‌ ಇಲ್ಯಾಸಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಅಖಿಲ ಭಾರತ ಇಮಾಮ್‌ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸುಮಾರು ಒಂದು ಗಂಟೆ ಕಾಲ ಗೋಪ್ಯ ಸಭೆ ನಡೆಯಿತು.

ಭಾಗವತ್‌ ಅವರ ಜತೆಗೆ ಸಂಘದ ಹಿರಿಯ ಕಾರ್ಯ ನಿರ್ವಾಹಕರಾದ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್‌, ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಪೋಷಕ ಇಂದ್ರೇಶ್‌ ಕುಮಾರ್‌ ಇದ್ದರು.

ಸಭೆಯಲ್ಲಿ ನಡೆದ ಚರ್ಚೆ ಕುರಿತು ಮಾಹಿತಿ ನೀಡಿದ ಅಹ್ಮದ್‌ ಇಲ್ಯಾಸಿ ಅವರ ಸಹೋದರ ಸುಹೈಬ್‌ ಇಲ್ಯಾಸಿ, ‘ನಮ್ಮ ತಂದೆಯವರ ಪುಣ್ಯತಿಥಿಯ ದಿನದಂದು ಆಹ್ವಾನದ ಮೇರೆಗೆ ಭಾಗ ವತ್ ಬಂದಿದ್ದರು. ಇದು ಸಂತಸದ ವಿಷಯವಾಗಿದ್ದು, ದೇಶಕ್ಕೆ ಉತ್ತಮ ಸಂದೇಶವೂ ರವಾನೆಯಾಗಿದೆ’ ಎಂದರು.

ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಆರ್‌ಎಸ್‌ಎಸ್‌ ಮುಖ್ಯಸ್ಥರು ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ‘ಹಿಂದೂಗಳಿಗೆ ‘ಕಾಫಿರ್‌’ ಪದವನ್ನು ಬಳಸುವುದು ಸರಿಯಲ್ಲ. ಇದು ಉತ್ತಮ ಸಂದೇಶ ರವಾನಿಸುವುದಿಲ್ಲ’ ಎಂದು ಸಭೆಯಲ್ಲಿ ಭಾಗವತ್‌ ಅವರು ಹೇಳಿದರು. ‘ಕೆಲ ಬಲಪಂಥೀಯ ಕಾರ್ಯಕರ್ತರು ಮುಸ್ಲಿಮರನ್ನು ‘ಜಿಹಾದಿ’ ಮತ್ತು ‘ಪಾಕಿಸ್ತಾನಿ’ ಎಂದೂ ಕರೆಯುವುದು ಸರಿಯಲ್ಲ’ ಎಂದು ಸಭೆಯಲ್ಲಿದ್ದ ಮುಸ್ಲಿಂ ಬುದ್ಧಿಜೀವಿಗಳು ಆಕ್ಷೇಪಿಸಿದರು.

‘ಕಾಫಿರ್‌ ಪದ ಬಳಕೆಯ ನಿಜವಾದ ಉದ್ದೇಶವೇ ಬೇರೆಯಿದೆ. ಆದರೆ ಅದೀಗ ದುರ್ಬಳಕೆ ಆಗುತ್ತಿದೆ’ ಎಂದು ಮುಸ್ಲಿಂ ಬುದ್ಧಿಜೀವಿಗಳು ಭಾಗವತ್ ಅವರಿಗೆ ತಿಳಿಸಿದರು. ಮುಸ್ಲಿಂ ಬುದ್ಧಿಜೀವಿಗಳ ಆತಂಕಕ್ಕೆ ಸಮ್ಮತಿ ಸೂಚಿಸಿದ ಭಾಗವತ್, ‘ಹಿಂದೂ ಮತ್ತು ಮುಸ್ಲಿಮರ ಡಿಎನ್‌ಎ ಒಂದೇ’ ಎಂದು ಪುನರುಚ್ಚರಿಸಿದರು.

‘ಸರಸಂಘಚಾಲಕರು ಎಲ್ಲ ವರ್ಗದ ಜನರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಇದು ನಿರಂತರ ಸಂವಾದ ಪ್ರಕ್ರಿಯೆಯ ಭಾಗ’ ಎಂದು ಸಭೆ ಕುರಿತು ಆರ್‌ಎಸ್‌ಎಸ್‌ ಪ್ರಚಾರ ಪ್ರಮುಖ ಸುನಿಲ್‌ ಅಂಬೇಕರ್‌ ಪ್ರತಿಕ್ರಿಯಿಸಿದರು.

ಭಾಗವತ್ ಅವರು ಇತ್ತೀಚೆಗೆ ದೆಹಲಿಯ ಮಾಜಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌, ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್‌.ವೈ. ಖುರೇಶಿ, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಲೆಫ್ಟಿನೆಂಟ್‌ ಜನರಲ್‌ ಜಮೀರ್‌ ಉದ್ದೀನ್‌ ಶಾ, ಮಾಜಿ ಸಂಸದ ಶಾಹಿದ್‌ ಸಿದ್ದಿಕಿ ಮತ್ತು ವ್ಯಾಪಾರಿ ಸಯೀದ್‌ ಶೇರ್ವಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು