ಗುರುವಾರ , ಫೆಬ್ರವರಿ 25, 2021
19 °C

ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ: ‘ಮುಂಬೈ ನಮ್ಮದೇ’ ಎಂದ ಅಜಿತ್‌ ಪವಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಮುಂಬೈ ನಗರ ಮಹಾರಾಷ್ಟ್ರಕ್ಕೆ ಸೇರಿದ್ದು. ಅದು ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಇದು ಎ‌ಲ್ಲರಿಗೂ ಗೊತ್ತಿರುವ ವಿಷಯ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಗುರುವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ್ದ ಕರ್ನಾಟಕದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ನಾವು ಮೊದಲಿನಿಂದಲೂ ಮುಂಬೈ ಕರ್ನಾಟಕದಲ್ಲಿದ್ದವರು. ಹೀಗಾಗಿ ಮುಂಬೈ ಮೇಲೆ ನಮಗೆ ಹಕ್ಕು ಮತ್ತು ಪಾಲಿದೆ. ಮುಂಬೈ ನಗರವನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಈಗಿನಿಂದಲೇ ಬೇಡಿಕೆ ಇಡುತ್ತೇವೆ. ಅಲ್ಲಿಯವರೆಗೂ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಅಜಿತ್‌ ಪವಾರ್‌, ‘ಮರಾಠಿ ಭಾಷಿಗರಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ನಮ್ಮ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಒತ್ತಾಯಿಸಿದ್ದರು. ಹೀಗಾಗಿ ಕರ್ನಾಟಕದ ಜನರನ್ನು ಸಮಾಧಾನಪಡಿಸಲು ಸವದಿ ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದರು.

‘ಮುಂಬೈ ನಿನ್ನೆಯೂ ನಮ್ಮದಾಗಿತ್ತು. ಇಂದೂ ನಮ್ಮದೇ. ಮುಂದೆಯೂ ನಮ್ಮದಾಗಿರಲಿದೆ. ಇದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಸವದಿ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಅವರ ಬೇಡಿಕೆಗೆ ಅರ್ಥವೇ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಮರಾಠಿ ಭಾಷಿಗರು ನೆಲೆಸಿರುವ ಪ್ರದೇಶಗಳು ತನ್ನದೆಂದು ಕರ್ನಾಟಕವು ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಹೀಗಾಗಿ ನಾವು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದೇವೆ. ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಉಭಯ ರಾಜ್ಯಗಳ ನಡುವಣ ಗಡಿ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ’ ಎಂದು ಅವರು ನುಡಿದಿದ್ದಾರೆ.

‘ಸವದಿ ಹೇಳಿಕೆ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಮಹಾರಾಷ್ಟ್ರದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರು ಸ್ಪಷ್ಟಪಡಿಸಬೇಕು’ ಎಂದು ಮಹಾರಾಷ್ಟ್ರದ ಎನ್‌ಸಿಪಿ ವಕ್ತಾರ ಮಹೇಶ್‌ ತಾಪಸೆ ಒತ್ತಾಯಿಸಿದ್ದಾರೆ.

‘ನೀವು ಮಹಾರಾಷ್ಟ್ರದ ಪರ ಇದ್ದರೆ ಸವದಿ ಹೇಳಿಕೆಗೆ ತೀಕ್ಷ್ಣ ಪ‍್ರತಿಕ್ರಿಯೆ ನೀಡಿ’ ಎಂದು ಅವರು ವಿಡಿಯೊ ಸಂದೇಶದಲ್ಲಿ ಆಗ್ರಹಿಸಿದ್ದಾರೆ.

ಸವದಿಗೆ ಇತಿಹಾಸ ಗೊತ್ತಿಲ್ಲ: ರಾವುತ್‌

‘ಜನರು ತಮಗೆ ಬೇಕಾದಂತೆ ಮಾತನಾಡುತ್ತಾರೆ. ಅವರ ಹೇಳಿಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಸವದಿ ಅವರಿಗೆ ಇತಿಹಾಸ ಗೊತ್ತಿಲ್ಲ. ಅದನ್ನು ಮೊದಲು ತಿಳಿದುಕೊಳ್ಳಲಿ. ಮರಾಠಿ ಭಾಷಿಗರ ಪ್ರಾಬಲ್ಯವಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಮ್ಮ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರೇ ಒತ್ತಾಯಿಸುತ್ತಿದ್ದಾರೆ’ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ತಿರುಗೇಟು ನೀಡಿದ್ದಾರೆ.

‘ಸವದಿ ಅವರ ಹೇಳಿಕೆ ಅರ್ಥವಿಲ್ಲದ್ದು. ಅದಕ್ಕೆ ಮಹತ್ವ ನೀಡದಿರುವುದೇ ಒಳ್ಳೆಯದು. ಸವದಿ ಅವರು ಮಹಾರಾಷ್ಟ್ರಕ್ಕೆ ಬರಲಿ. ಬೆಳಗಾವಿ ಹಾಗೂ ಇತರ ಮರಾಠಿ ಭಾಷಿಗರ ಪ್ರಾಬಲ್ಯವಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ನಮ್ಮ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರೇ ಅವರ ಎದುರು ಬೇಡಿಕೆ ಇಡಲಿದ್ದಾರೆ’ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ರಾವುತ್‌ ಹೇಳಿದ್ದಾರೆ.

‘ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿರುವ ಕನ್ನಡ ಶಾಲೆ, ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಸಂಘಗಳಿಗೆ ಅನುದಾನ ಒದಗಿಸುತ್ತಿದೆ. ಬೆಳಗಾವಿಯಲ್ಲಿ ಇದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಸಿ.ಎಂ ಪ್ರಬುದ್ಧರಂತೆ ಮಾತನಾಡಲಿ: ಸವದಿ

ರಾಯಚೂರು: ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ವಿಷಯ ಪದೆಪದೇ ಕೆದಕುತ್ತಿದ್ದು, ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ಪ್ರಬುದ್ಧ ರಾಜಕಾರಣಿಯಂತೆ ಮಾತನಾಡಬೇಕು’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್‌ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾಜನ್‌ ಆಯೋಗದ ವರದಿ ಸಂಪೂರ್ಣವಾಗಿ ಒಪ್ಪಿದ್ದೇವೆ. ಆದರೂ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹಾಕಿದ್ದಾರೆ. ತೀರ್ಪು ನಮ್ಮ ಪರವಾಗಿಯೇ ಬರುವ ವಿಶ್ವಾಸವಿದೆ’ ಎಂದರು.

‘ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಕನ್ನಡದ ನೆಲ- ಜಲದ ವಿಚಾರ ಬಂದಾಗ, ನಾವು ಸುಮ್ಮನಿರಲ್ಲ. ರಾಜಕೀಯ ಕಾರಣಗಳಿಗೆ ಕನ್ನಡಿಗರನ್ನು ಕೆದಕಬೇಡಿ’ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು