ಗುರುವಾರ , ಮಾರ್ಚ್ 30, 2023
24 °C
ಎರಡು ಮಹಡಿ, 88 ಕೊಠಡಿಗಳು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ

ಮುಂಬೈ ಮಹಾನಗರದಲ್ಲೊಂದು ಬೃಹತ್ ಶೌಚಾಲಯ ಸಂಕೀರ್ಣ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ ಅಂಧೇರಿ ಪಶ್ಚಿಮ ಭಾಗದ ಜುಹು ಗಲ್ಲಿ ಸಮೀಪದಲ್ಲಿ ‘ಬೃಹತ್‌ ಸಾರ್ವಜನಿಕ ಶೌಚಾಲಯ ಸಂಕೀರ್ಣವೊಂದು ತಲೆ ಎತ್ತಿದೆ.

ಸುಂದರ ವಿನ್ಯಾಸ ಮತ್ತು ಥೀಮ್ ಆಧಾರಿತ ಬಣ್ಣಗಳೊಂದಿಗೆ ನಿರ್ಮಾಣವಾಗಿರುವ ಈ ವಿನೂತನ ಮಾದರಿಯ ಜಂಬೊ ಗಾತ್ರದ ಸಾರ್ವಜನಿಕ ಶೌಚಾಲಯ ಸಂಕೀರ್ಣ ಜುಹುಗಲ್ಲಿಯ ಬಿಎಂಡಬ್ಲ್ಯು ಕಾರ್‌ ಶೋ ರೂಂ ಎದುರಿನ ತಾಷ್ಕೆಂಟ್‌ ಬೇಕರಿ ಪಕ್ಕದಲ್ಲಿದೆ.

ಒಟ್ಟು ನಾಲ್ಕು ಸಾವಿರ ಚದರ ಅಡಿಯಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕಿ ನಿರ್ಮಿಸಿರುವ ಎರಡು ಮಹಡಿಗಳ ಈ ಸಂಕೀರ್ಣದಲ್ಲಿ 88 ಶೌಚಾಲಯ ಕೊಠಡಿಗಳಿವೆ. ಮುಂಬೈನಾದ್ಯಂತ ಕೋವಿಡ್‌–19 ಸಾಂಕ್ರಾಮಿಕ ರೋಗ ತೀವ್ರವಾಗಿದ್ದ ಅವಧಿಯಲ್ಲೇ ಈ ಶೌಚಾಲಯ ನಿರ್ಮಾಣವಾಗಿದೆ.

ಕಾಂಗ್ರೆಸ್‌ ಪಕ್ಷದ ಮಹಾನಗರ ಪಾಲಿಕೆ ಸದಸ್ಯ ಮೆಹರ್‌ ಮೊಹ್ಸಿನ್‌ ಹೈದರ್ ಅವರ ಪ್ರಯತ್ನ ಹಾಗೂ ಮುತುವರ್ಜಿ ಯಿಂದಾಗಿ ನಿರ್ಮಾಣವಾಗಿರುವ ಶೌಚಾಲಯ ಸಂಕೀರ್ಣವನ್ನು ಶನಿವಾರ ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ (ಎಂಆರ್‌ಸಿಸಿ) ಅಧ್ಯಕ್ಷ ಭಾಯ್‌ ಜಗದೀಪ್ ಅವರು ಉದ್ಘಾಟಿಸಿದರು.

‘ಇದು ಮುಂಬೈನಲ್ಲೇ ಅತ್ಯಂತ ದೊಡ್ಡದಾದ ಶೌಚಾಲಯ ಸಂಕೀರ್ಣ. ಇದರಲ್ಲಿರುವ ಕೆಲವು ಕೊಠಡಿಗಳಲ್ಲಿ ಆಧುನಿಕ ಸೌಲಭ್ಯಗಳಿವೆ. ಅಷ್ಟೇ ಅಲ್ಲ, ಶೌಚಾಲಯ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಕಾರ್ಪೊರೇಟರ್ ಹೈದರ್ ತಿಳಿಸಿದರು.

ಶೌಚಾಲಯ ಸಂಕೀರ್ಣದ ಕೆಳ ಮಹಡಿಯ ಕೊಠಡಿಗಳನ್ನು ಪುರುಷರಿಗೆ, ಮೊದಲ ಮಹಡಿಯ ಕೊಠಡಿಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ನಾಲ್ಕು ಕೊಠಡಿಗಳನ್ನು ಅಂಗವಿಕಲರಿಗಾಗಿ ಮೀಸಲಿಡಲಾಗಿದೆ. ‘ಈ ಶೌಚಾಲಯ ಸಂಕೀರ್ಣದಲ್ಲಿ ಸಣ್ಣದೊಂದು ಉದ್ಯಾನವನ್ನೂ ನಿರ್ಮಿಸಿದ್ದೇವೆ‘ ಎಂದು ಶೌಚಾಲಯ ವಿನ್ಯಾಸ ಕಂಪನಿ ರಿಧಿ ಅಸೋಸಿಯೇಟ್ಸ್‌ ತಿಳಿಸಿದರು.

ಇಂಥದ್ದೇ ಹಲವು ವಿಶಿಷ್ಟತೆಗಳಿಗೆ ಹೆಸರಾದ ಕಾರ್ಪೊರೇಟರ್ ಹೈದರ್ ಅವರು ಈ ಹಿಂದೆ ಮುಂಬೈನ ಗಿಲ್ಬರ್ಟ್‌ ಹಿಲ್‌ನಲ್ಲಿ 55 ಕೊಠಡಿಗಳಿರುವ ಶೌಚಾಲಯ ಸಂಕೀರ್ಣವೊಂದನ್ನು ನಿರ್ಮಿಸಿದ್ದರು. ಅದೇ ಇಲ್ಲಿವರೆಗೆ ಅತಿ ದೊಡ್ಡದಾದ ಶೌಚಾಲಯ ಸಂಕೀರ್ಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು