ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ: ಮೋಹನ್‌ ಭಾಗವತ್‌

Last Updated 11 ಜನವರಿ 2023, 18:14 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ, ಆದರೆ ಅವರು ತಮ್ಮ ಶ್ರೇಷ್ಠತೆಯ ಪ್ರತಿಪಾದನೆಯನ್ನು ಕೈಬಿಡಬೇಕು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖವಾಣಿಗಳಾದ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ಸರಳ ಸತ್ಯ ಏನೆಂದರೆ, ಹಿಂದೂಸ್ತಾನವು ಹಿಂದೂಸ್ತಾನವಾಗಿಯೇ ಉಳಿಯಬೇಕು. ಭಾರತದಲ್ಲಿನ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಇಸ್ಲಾಂ ಧರ್ಮವೂ ಭಯಪಡಬೇಕಿಲ್ಲ’ ಎಂದೂ ಹೇಳಿದ್ದಾರೆ.

‘ಸಾವಿರಾರು ವರ್ಷಗಳಿಂದ ಹಿಂದೂ ಸಮಾಜ ಸಂಘರ್ಷ ಎದುರಿಸುತ್ತಲೇ ಬಂದಿದೆ. ಸದ್ಯ ಈ ಅಧುನಿಕತೆಯಲ್ಲಿ ಭಾರತ ಸೇರಿದಂತೆ ಇತರ ಕಡೆಗಳಲ್ಲಿ ಹಿಂದೂಗಳಲ್ಲಿ ಆಕ್ರಮಣಶೀಲತೆ ಕಂಡುಬರುತ್ತಿದೆ. ಹಿಂದೂಗಳಲ್ಲಿ ಜಾಗೃತಿ ಮೂಡುತ್ತಿರುವುದು ಇದಕ್ಕೆ ಕಾರಣ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಹಿಂದೂ ಎಂಬುದು ನಮ್ಮ ಅಸ್ಮಿತೆ, ನಮ್ಮ ರಾಷ್ಟ್ರೀಯತೆ ಹಾಗೂ ನಮ್ಮ ನಾಗರಿಕತೆಯ ಗುಣಲಕ್ಷಣ. ಪ್ರತಿಯೊಬ್ಬರು ನಮ್ಮವರು ಎಂಬ ಪರಿಗಣನೆ, ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು ಎಂಬುದು ನಮ್ಮ ವೈಶಿಷ್ಟ್ಯ’.

‘ನಾನು ಹೇಳುವುದು ಮಾತ್ರ ಸತ್ಯ, ನೀವು ಹೇಳುವುದು ಸುಳ್ಳು ಎಂದು ಹಿಂದೂಗಳು ಎಂದೂ ಹೇಳುವುದಿಲ್ಲ. ನಿಮ್ಮ ಪ್ರಕಾರ ನಿಮ್ಮ ನಿಲುವು ಸರಿ, ನನ್ನ ನಂಬಿಕೆಯಂತೆ ನನ್ನದು ಸರಿ ಎನ್ನುವವರು ನಾವು. ಹೀಗಾಗಿ, ನಮ್ಮ ನಡುವೆ ಸಂಘರ್ಷ ಏಕೆ? ಎಲ್ಲರೂ ಒಟ್ಟಿಗೆ ಸಾಗಬೇಕು. ಇದೇ ಹಿಂದುತ್ವ’ ಎಂದು ಭಾಗವತ್‌ ಹೇಳಿದ್ದಾರೆ.

ಭಾಗವತ್‌ ಅಭಿಪ್ರಾಯಕ್ಕೆ ನಕ್ವಿ ಶ್ಲಾಘನೆ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಅವರ ಮುಸ್ಲಿಮರ ಕುರಿತ ಹೇಳಿಕೆಗೆ ಬಿಜೆಪಿ ನಾಯಕ ಮುಖ್ತರ್‌ ಅಬ್ಬಾಸ್‌ ನಕ್ವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಸಹಭಾಗಿತ್ವ ಮತ್ತು ಪ್ರಾಧಾನ್ಯತೆ ಸಾಧಿಸಲು ಹೋರಾಡದಿರುವ ಮನೋಭಾವವು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುತ್ತದೆ. ಇದರ ಫಲವಾಗಿ ವಿಶ್ವದ 10 ಮುಸ್ಲಿಮರಲ್ಲಿ ಒಬ್ಬರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಕ್ಕುಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ’ ಎಂದು ಅವರು ಹೇಳಿದರು.

‘ಎಲ್‌ಜಿಬಿಟಿ ಸಮುದಾಯಕ್ಕೆ ಬೆಂಬಲ’
ಲೈಂಗಿಕ ಅಲ್ಪಸಂಖ್ಯಾತರಾದ ಎಲ್‌ಜಿಬಿಟಿ ಸಮುದಾಯದವರ ಹಕ್ಕುಗಳಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್‌ ಮುಖವಾಣಿಗಳಾದ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ ಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಎಲ್‌ಜಿಬಿಟಿ ಸಮುದಾಯದವರು ಕೂಡ ಸಮಾಜದ ಭಾಗವಾಗಿದ್ದಾರೆ, ಅವರಿಗೂ ಬದುಕುವ ಹಕ್ಕಿದೆ, ಅವರ ಜೀವನವನ್ನು ನಾವು ಗೌರವಿಸಬೇಕು’ ಎಂದು ಹೇಳಿದ್ದಾರೆ.

ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು: ಸಿಬಲ್‌
‘ಹಿಂದೂಸ್ತಾನವು ಹಿಂದೂಸ್ತಾನವಾಗಿಯೇ ಉಳಿಯಬೇಕು’ ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್, ‘ಭಾಗವತ್‌ ಅವರ ಮಾತನ್ನು ಒಪ್ಪುತ್ತೇನೆ. ಆದರೆ, ಮನುಷ್ಯ ಮನುಷ್ಯವಾಗಿಯೇ ಉಳಿಯಬೇಕು’ ಎಂದು ಬುಧವಾರ ಹೇಳಿದ್ದಾರೆ.

ಇತ್ತೀಚೆಗೆ, ಸಂದರ್ಶನದಲ್ಲಿ ಭಾಗವತ್‌, ‘ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ, ಆದರೆ ಅವರು ತಮ್ಮ ಶ್ರೇಷ್ಠತೆಯ ಪ್ರತಿಪಾದನೆಯನ್ನು ಕೈಬಿಡಬೇಕು’ ಎಂದು ಹೇಳಿದ್ದರು.

ಭಾಗವತ್‌ ಅವರ ಹೇಳಿಕೆಗೆ ಸಿಬಲ್‌ ಅವರು ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕಿದೆ. ಈ ಸಂದರ್ಭದಲ್ಲಿಯೇ ಆರ್‌ಎಸ್‌ಎಸ್‌ ಮುಖ್ಯಸ್ಥರ ಈ ಹೇಳಿಕೆಗೆ ಮಹತ್ವ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಅವರಿಗೂ ಖಾಸಗಿತನ ಹಾಗೂ ಸಾಮಾಜಿಕ ಬದುಕು ಅಗತ್ಯ. ಅವರು ನಮ್ಮಂತೆಯೇ ಮನುಷ್ಯರು. ಇತರರಂತೆ ಅವರಿಗೂ ಜೀವಿಸುವ ಹಕ್ಕಿದೆ. ಎಲ್‌ಜಿಬಿಟಿ ಸಮುದಾಯಕ್ಕೆ ತಾವು ಬೆಂಬಲಿಸುತ್ತಿರುವುದಕ್ಕೆ ಹಿಂದೂ ಧರ್ಮಗ್ರಂಥಗಳು ಹಾಗೂ ಪುರಾಣಗಳೇ ಆಧಾರ’ ಎಂದಿದ್ದಾರೆ.

ಮುಸ್ಲಿಮರಿಗೆ ಅನುಮತಿ ನೀಡಲು ಭಾಗವತ್‌ ಯಾರು: ಒವೈಸಿ
ಹೈದರಾಬಾದ್‌:
ಮುಸ್ಲಿಮರು ಭಾರತದಲ್ಲಿ ವಾಸಿಸಲು ಅನುಮತಿ ನೀಡಲು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಯಾರು ಮತ್ತು ಮುಸ್ಲಿಮರ ಪೌರತ್ವಕ್ಕೆ ಷರತ್ತು ವಿಧಿಸಲು ಅವರಿಗೆ ಎಷ್ಟು ಧೈರ್ಯ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್
ಒವೈಸಿ ಕಿಡಿಕಾರಿದ್ದಾರೆ.

ಭಾಗವತ್‌ ಹೇಳಿಕೆ ಬೆನ್ನಲ್ಲೇ ಸರಣಿ ಟ್ವೀಟ್‌ ಮಾಡಿರುವ ಒವೈಸಿ, ‘ಭಾರತದಲ್ಲಿ ವಾಸಿಸಲು ಅಥವಾ ನಮ್ಮ ನಂಬಿಕೆಯನ್ನು ಅನುಸರಿಸಲು ಅನುಮತಿ ನೀಡಲು ಮೋಹನ್ ಯಾರು? ನಮ್ಮ ನಂಬಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇರಲು ಇಲ್ಲಿ ವಾಸಿಸುತ್ತಿಲ್ಲ ಎಂದು ಹೇಳಿದ್ದಾರೆ.

‘ಹಿಂದೂಗಳ ಪ್ರತಿನಿಧಿಯಾಗಿ ಮೋಹನ್ ಅವರನ್ನು ಆಯ್ಕೆ ಮಾಡಿದ್ದು ಯಾರು? ಅವರು 2024ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ? ಅವರಿಗೆ ಸ್ವಾಗತ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT