ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆ ಹೇಳಿಕೆಯಿಂದ ಕೇಂದ್ರಕ್ಕೆ ಮುಜುಗರ, ಪ್ರಧಾನಿ ಕ್ರಮ ಕೈಗೊಳ್ಳಲಿ: ಶಿವಸೇನಾ

Last Updated 25 ಆಗಸ್ಟ್ 2021, 7:55 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ ರಾಣೆ ಕೇಂದ್ರ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಶಿವಸೇನಾ ಬುಧವಾರ ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಣೆ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.

ರಾಯಗಡ ಜಿಲ್ಲೆಯಲ್ಲಿ ಸೋಮವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ್ದ ರಾಣೆ ಅವರು, ‘ಠಾಕ್ರೆ ಅವರು ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವಾಗ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿ ಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದು ಹೇಳಿದ್ದರು.

ರಾಣೆ ಹೇಳಿಯಿಂದ ಮಹಾರಾಷ್ಟ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕಾರಣದಿಂದ ಕೇಂದ್ರ ಸಚಿವರನ್ನು ಮಂಗಳವಾರ ಬಂಧಿಸಲಾಗಿತ್ತು. ರಾಯಗಡದ ಮಹಡ್‌ ನ್ಯಾಯಾಲಯವು ರಾಣೆ ಅವರಿಗೆ ಜಾಮೀನು ನೀಡಿತ್ತು.

ರಾಣೆ ಅವರನ್ನು ‘ರಂಧ್ರಗಳಿರುವ ಬಲೂನ್‌’ಗೆ ಹೋಲಿಸಿರುವ ಸಾಮ್ನಾ, ಬಿಜೆಪಿಯು ಈ ಬಲೂನಿಗೆ ಎಷ್ಟು ಗಾಳಿ ತುಂಬಲು ಪ್ರಯತ್ನಿಸಿದರೂ ಅದು ಎಂದಿಗೂ ಮೇಲಕ್ಕೆ ಹೋಗುವುದಿಲ್ಲ ಎಂದು ಹೇಳಿದೆ. ಕೇಂದ್ರ ಸಚಿವ ಸ್ಥಾನ ನೀಡಿದರೂ ರಾಣೆ, ‘ರಸ್ತೆ ಬದಿಯ ದರೋಡೆಕೋರ’ನ ರೀತಿಯೇ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಮೋದಿ ಮತ್ತು ಅಮಿತ್‌ ಶಾ ಅವರು ರಾಣೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾರಾದರೂ ಪ್ರಧಾನಿಯ ಬಗ್ಗೆ ಈ ರೀತಿ ಮಾತನಾಡಿದ್ದರೆ ಅವರ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ರಾಣೆಯ ಅಪರಾಧವೂ ಅದೇ ಆಗಿದೆ ಎಂದು ಸಂಪಾದಕೀಯ ಹೇಳಿದೆ.

ಪ್ರಧಾನಿಯವರು ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದಿರುವ ಮರಾಠಿ ದಿನಪತ್ರಿಕೆ, ಬಿಜೆಪಿ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.

‘ಮುಖ್ಯಮಂತ್ರಿ ಅವರ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿರುವುವವರ ಹಿಂದೆ ಯಾರ‍್ಯಾರಿದ್ದಾರೆ ಎಂಬುದನ್ನು ಕಾನೂನುಬದ್ಧವಾಗಿಯೇ ಹೊರತೆಗೆಯಬೇಕಿದೆ’ ಎಂದು ಆಗ್ರಹಿಸಿರುವ ‘ಸಾಮ್ನಾ’, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಕೆಲವು ಬುದ್ಧಿಜೀವಿಗಳನ್ನು ಜೈಲಿನಲ್ಲಿ ನರಳುವಂತೆ ಹಿಂದಿನ ದೇವೇಂದ್ರ ಫಡಣವೀಸ್ ಸರ್ಕಾರ ಮಾಡಿತ್ತು’ ಎಂದು ನೆನಪಿಸಿದೆ.

ಮುಖ್ಯಮಂತ್ರಿಯ ಮೇಲೆ ದೈಹಿಕವಾಗಿ ಆಕ್ರಮಣ ಮಾಡುವ ಬೆದರಿಕೆ ಹಾಕಿರುವುದು ಸಂಯುಕ್ತ ಮಹಾರಾಷ್ಟ್ರ ಚಳವಳಿಯ ಸಂದರ್ಭದಲ್ಲಿ ಹುತಾತ್ಮರಾದ 105 ಜನರ ಭಾವನೆಗಳಿಗೆ ಘಾಸಿ ಮಾಡಿದಂತಾಗಿದೆ. ರಾಣೆ ಮಹಾರಾಷ್ಟ್ರವನ್ನು ನೋಯಿಸಿದ್ದಾರೆ. ಅಲ್ಲದೆ ರಾಜ್ಯದ ಬಿಜೆಪಿ ನಾಯಕರಾದ ದೇವೇಂದ್ರ ಫಡಣವೀಸ್ ಮತ್ತು ಚಂದ್ರಕಾಂತ್ ಪಾಟೀಲ್ ಅವರು ರಾಣೆ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಸೇನಾ ದೂರಿದೆ.

ಯಾವುದೇ ಸುಸಂಸ್ಕೃತ ನಾಯಕರು ಕ್ಷಮೆ ಕೇಳುವ ಮೂಲಕ ವಿವಾದ ಕೊನೆಗೊಳಿಸಲು ಬಯಸುತ್ತಾರೆ. ಆದರೆ ಬಿಜೆಪಿಗೆ ಮಹಾರಾಷ್ಟ್ರದ ಹೆಮ್ಮೆ ಮತ್ತು ಮುಖ್ಯಮಂತ್ರಿಯ ಪ್ರತಿಷ್ಠೆ ಮುಖ್ಯವಲ್ಲ ಎಂದು ಸೇನಾ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT