ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ: ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ

Last Updated 14 ಆಗಸ್ಟ್ 2020, 13:46 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಭಾಜನರಾಗಿದ್ದು, ಒಟ್ಟಾರೆ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

‘ಗುರುವಾರದಂದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ಅತ್ಯಧಿಕ ಅವಧಿಗೆ ಆಡಳಿತ ನಡೆಸಿದ ಪ್ರಧಾನಿಗಳ ಪೈಕಿ ನಾಲ್ಕನೆಯವರಾಗಿದ್ದಾರೆ. ವಾಜಪೇಯಿ ಅವರು ಒಟ್ಟು 2,268 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಗುರುವಾರ ನರೇಂದ್ರ ಮೋದಿ ಅವರು ಈ ಅವಧಿಯನ್ನು ದಾಟಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ಟ್ವೀಟ್‌ ಮಾಡಿದ್ದಾರೆ.

ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದವರ ಪಟ್ಟಿಯಲ್ಲಿ ಕಾಂಗ್ರೆಸ್‌ನಿಂದ ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ಮನಮೋಹನ್‌ ಸಿಂಗ್‌ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಇದ್ದಾರೆ.

ಎರಡನೇ ಅವಧಿಗೆ ಮೋದಿ ಪ್ರಧಾನಿಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ಸಂದಿದೆ. ಈವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಆದರೂ ಸಾಮಾಜಿಕ ಮಾಧ್ಯಮಗಳು ಮತ್ತು ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣಗಳ ಮೂಲಕ ಬೆಂಬಲಿಗರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

2014 ರಲ್ಲಿ ಮೋದಿ ನೇತೃತ್ವದ ಬಿಜೆಪಿಯು ವಿರೋಧ ಪಕ್ಷಗಳನ್ನು ಹಿಮ್ಮೆಟ್ಟಿಸಿ ಚುನಾವಣೆಯಲ್ಲಿ ಮುನ್ನಡೆ ದಾಖಲಿಸಿತು.ಅಲ್ಲದೆ ಕಳೆದ ಮೂರು ದಶಕಗಳಲ್ಲಿಯೇ ಅತಿಹೆಚ್ಚು ಸದಸ್ಯರು ಗೆದ್ದಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯರಾಗುವುದಕ್ಕೂ ಮುನ್ನಪ್ರಧಾನಿ ಮೋದಿ 2001 ರಿಂದ 13 ವರ್ಷಗಳ ಕಾಲ ತಮ್ಮ ತವರು ರಾಜ್ಯ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಉತ್ತರ ಗುಜರಾತ್‌ನ ವಾಡ್‌ನಗರದಲ್ಲಿ ಜನಿಸಿದ ಅವರು ಸಣ್ಣ ವಯಸ್ಸಿನಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದರು. ಇದು ಅವರ ರಾಜಕೀಯ ಜೀವನದಲ್ಲಿಅಪಾರ ಮಹತ್ವವನ್ನು ಪಡೆದುಕೊಂಡಿತು.

ಶಾಲೆಯಲ್ಲಿ ಪ್ರಬಲ ಚರ್ಚಾಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಅವರು, ಬಳಿಕ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದ್ದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ ಸೇರಿಕೊಂಡರು.

ಮೋದಿ 18 ವಯಸ್ಸಿನವರಾಗಿದ್ದಾಗಲೇ ಅವರ ಪೋಷಕರು ಅವರಿಗೆ ವಿವಾಹವನ್ನು ನಿಶ್ಚಯಿಸಿದ್ದರು. ಆಗ ಅವರು ಮನೆ ಬಿಟ್ಟು 1971ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿದರು. 1975-77ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹಲವಾರು ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಿದಾಗ ಮತ್ತು ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಿದಾಗ, ಪ್ರಧಾನಿ ಮೋದಿ ತಲೆಮರೆಸಿಕೊಂಡು ಪುಸ್ತಕ ಬರೆದರು.

1985ರಲ್ಲಿ ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಮೋದಿಯವರನ್ನು ನೇಮಿಸಲಾಯಿತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕೇಶುಭಾಯ್ ಪಟೇಲ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಾಗ ಮೋದಿ ಅವರನ್ನು 2001ರಲ್ಲಿ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಯಿತು.

2002ರಲ್ಲಿ ನಡೆದ ಗೋಧ್ರಾ ರೈಲು ಗಲಭೆಯನ್ನು ತಡೆಯುವಲ್ಲಿ ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಪ್ರಧಾನಿ ಮೋದಿ ಅವರ ಮೇಲಿತ್ತು. ಬಳಿಕ 2012ರಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಿದ ತನಿಖೆಯಲ್ಲಿ ವಿಶೇಷ ತನಿಖಾ ತಂಡ ನೀಡಿದ ವರದಿಯಲ್ಲಿ, ಮುಖ್ಯಮಂತ್ರಿ ಮೋದಿ ಅವರು ಗಲಭೆಯನ್ನು ನಿಯಂತ್ರಿಸಲು ಸಾಧ್ಯವಿದ್ದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು ಎಂದು ಹೇಳಿತ್ತು.

2013ರಲ್ಲಿ ಭ್ರಷ್ಟಾಚಾರದ ಆರೋಪಗಳು ಮತ್ತು ಆರ್ಥಿಕ ಮಂದಗತಿಯ ಮಧ್ಯೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯದ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿರುವಂತೆಯೇ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು. 2014ರ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಗೆದ್ದ ಬಿಜೆಪಿಯು, 2019ರಲ್ಲಿ ಎರಡನೇ ಬಾರಿಯೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT