ಬುಧವಾರ, ಅಕ್ಟೋಬರ್ 28, 2020
20 °C

ಅಸಂಘಟಿತ ಆರ್ಥಿಕ ವ್ಯವಸ್ಥೆ ನಾಶಗೊಳಿಸಿದ ಮೋದಿ ಸರ್ಕಾರ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

rahul gandhi

ರಾಯ‌ಪುರ :’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಆರು ವರ್ಷಗಳ ಆಡಳಿತದಲ್ಲಿ ಅಸಂಘಟಿತ ಆರ್ಥಿಕತೆಯನ್ನು ನಾಶಪಡಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ಛತ್ತೀಸಗಡದ 22 ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಚೇರಿ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.  ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

‘ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ ದೇಶದ ಆರ್ಥಿಕತೆ ಪರಿಣಾಮ ಬೀರಿದೆ. ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ. 

‘ಅಸಂಘಟಿತ ಆರ್ಥಿಕತೆಯು ದೇಶದಲ್ಲಿ ಶೇಕಡ 90 ರಷ್ಟು ಉದ್ಯೋಗವನ್ನು ಸೃಷ್ಟಿಸುತ್ತದೆ. ಆದರೆ, ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಲ್ಲಿನ ಲೋಪ ಇದಕ್ಕೆ ಹೊಡೆತ ನೀಡಿದೆ’ ಎಂದರು.    

‘ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಿಂದ ಅಸಂಘಟಿತ ಆರ್ಥಿಕತೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಲಯದಲ್ಲಿರುವ ಹಣವನ್ನು ದೊಡ್ಡ ಉದ್ಯಮಿಗಳಿಗೆ ವರ್ಗಾಯಿಸುವ ಇರಾದೆ ಮೋದಿ ಅವರದ್ದಾಗಿದೆ’ ಎಂದು ಅವರು ದೂರಿದ್ದಾರೆ. 

‘ದೇಶದ ಅಭಿವೃದ್ಧಿಗೆ ಸಂಘಟಿತ ಮತ್ತು ಅಸಂಘಟಿತ ಆರ್ಥಿಕತೆಗಳ ನಡುವಿನ ಸಮತೋಲನವನ್ನು ಪುನಃ ಸ್ಥಾಪಿಸುವ ಅಗತ್ಯವಿದೆ’ ಎಂದೂ ಅವರು  ಹೇಳಿದ್ದಾರೆ. 

‘ದೇಶದ ಅಸಂಘಟಿತ ಆರ್ಥಿಕತೆಯು ಸುರಕ್ಷಿತವಾಗಿದ್ದರೆ, ಪ್ರತಿಕೂಲ ಸಂದರ್ಭಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು