ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಆಪ್ತರಿಗೆ ಎನ್‌ಸಿಬಿ ತನಿಖೆ ಬಿಸಿ

ರಿಯಾ ಸಹೋದರ, ಸುಶಾಂತ್ ಮ್ಯಾನೇಜರ್ ನಿವಾಸದಲ್ಲಿ ಶೋಧ‌: ವಿಚಾರಣೆ
Last Updated 4 ಸೆಪ್ಟೆಂಬರ್ 2020, 20:25 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನಲ್ಲಿ ಮಾದಕ ಪದಾರ್ಥ ಬಳಕೆ ಮತ್ತು ಪೂರೈಕೆ ವಿರುದ್ಧ ತನಿಖೆ ಕೈಗೆತ್ತಿಕೊಂಡಿರುವ ಮಾದಕವಸ್ತು ನಿಯಂತ್ರಣ ದಳವು (ಎನ್‌ಸಿಬಿ), ಸುಶಾಂತ್‌ಸಿಂಗ್ ರಜಪೂತ್‌ಗೆ‌ ಆಪ್ತರಾಗಿದ್ದ ಶೋವಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಅವರನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಿತು.

ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ಮ್ಯಾನೇಜರ್ ಆಗಿದ್ದ ಮಿರಾಂಡಾ ಅವರಿಂದ ವಿವಿಧ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಪಡೆದುಕೊಂಡಿದ್ದಾರೆ.

ಎನ್‌ಸಿಬಿ ಪ್ರಾದೇಶಿಕ ಕಚೇರಿಯಲ್ಲಿ ಮೊದಲಿಗೆ ಇಬ್ಬರನ್ನೂ ಪ್ರತ್ಯೇಕವಾಗಿ, ಬಳಿಕ ಒಟ್ಟಿಗೆ ಕೂರಿಸಿ ಪ್ರಶ್ನೆಗಳನ್ನು ಕೇಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಿಯಾ, ಶೋವಿಕ್ ಹಾಗೂ ಮಿರಾಂಡಾ ಅವರು ಸುಶಾಂತ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಸುಶಾಂತ್ ಅವರು ಮರಿಜು
ವಾನಾ ಎಂಬ ಮಾದಕವಸ್ತು ಬಳಸುತ್ತಿದ್ದರು ಎಂದು ರಿಯಾ ಆರೋಪಿಸಿದ್ದಾರೆ. ಸುಶಾಂತ್ ಅವರಿಗೆ ನಿಷಿದ್ಧ ಮಾದಕವಸ್ತುವನ್ನು ಪೂರೈಸಿದ್ದು ಯಾರು ಎಂಬ ದಿಸೆಯಲ್ಲಿ ತನಿಖೆ ನಡೆಯುತ್ತಿದೆ.

ಎನ್‌ಸಿಬಿ ಶೋಧ: ಕಚೇರಿಯಲ್ಲಿ ವಿಚಾರಣೆಗೂ ಮುನ್ನ ಎನ್‌ಸಿಬಿ ಅಧಿಕಾರಿಗಳು ಶೋವಿಕ್ ಹಾಗೂ ಮಿರಾಂಡಾ ಅವರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸಾಂತಾಕ್ರೂಜ್‌ನಲ್ಲಿರುವ ಶೋವಿಕ್ ಮನೆ ಹಾಗೂ ಅಂಧೇರಿ ಪ್ರದೇಶದಲ್ಲಿರುವ ಮಿರಾಂಡಾ ಅವರ ನಿವಾಸಗಳಲ್ಲಿ ಬೆಳಗ್ಗೆ ಆರರಿಂದಲೇ ಪರಿಶೀಲನೆ ಆರಂಭವಾಗಿತ್ತು.

ಅಧಿಕಾರಿಗಳು ನಾಲ್ಕು ತಾಸು ಶೋಧ ನಡೆಸಿದರು. ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಎನ್‌ಸಿಬಿ ಉಪನಿರ್ದೇಶಕ ಕೆಪಿಎಸ್‌ ಮಲ್ಹೋತ್ರಾ ಅವರು ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದರು. ತಪಾಸಣೆ ಬಳಿಕ ವಿಚಾರಣೆಗೆ ಬರುವಂತೆ ಇಬ್ಬರಿಗೂ ನೋಟಿಸ್ ನೀಡಲಾಯಿತು. ಬಳಿಕ ಇಬ್ಬರನ್ನೂ ಕಚೇರಿಗೆ ಕರೆದೊಯ್ಯಲಾಯಿತು.

‘ಶೋವಿಕ್ ಸೂಚನೆ ಮೇರೆಗೆ ಪೂರೈಕೆ’

ಶೋವಿಕ್ ಸೂಚನೆ ಮೇರೆಗೆ ಮಾದಕವಸ್ತು ಪೂರೈಸುತ್ತಿರುವುದಾಗಿ ಆರೋಪಿ ಅಬ್ದುಲ್ ಬಾಸಿತ್ ಪರಿಹಾರ್ ಹೇಳಿಕೆ ನೀಡಿದ್ದಾನೆ ಎಂದು ಮುಂಬೈ ಕೋರ್ಟ್‌ಗೆ ಎನ್‌ಸಿಬಿ ಶುಕ್ರವಾರ ತಿಳಿಸಿತು.

ಪ್ರಕರಣದ ಇತರ ಆರೋಪಿಗಳಾದ ಜಾಯೆದ್ ವಿಲಾತ್ರ ಹಾಗೂ ಕೈಜನ್ ಇಬ್ರಾಹಿಂ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಇವರಿಬ್ಬರಿಂದ ಮಾದಕವಸ್ತು ಖರೀದಿಸಿದ್ದಾಗಿ ಪರಿಹಾರ್ ಒಪ್ಪಿಕೊಂಡಿದ್ದಾನೆ ಎಂದು ಎನ್‌ಸಿಬಿ ತಿಳಿಸಿದೆ.

‘ಪರಿಹಾರ್‌ಗೆ ಮಾದಕವಸ್ತು ಪೂರೈಕೆ ಜಾಲದ ಜತೆ ನಂಟು ಇದ್ದು, ಹೆಸರಾಂತ ವ್ಯಕ್ತಿಗಳ ಜತೆ ಸಂಪರ್ಕ ಬೆಳೆದಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ. ಪರಿಹಾರ್ ವಿಚಾರಣೆಯಲ್ಲಿ ಹಲವರ ಹೆಸರು ಬಹಿರಂಗವಾಗಿದ್ದು, ಜಾಲ ಬೇಧಿಸಲು ಇನ್ನಷ್ಟು ವಿಚಾರಣೆ ಅಗತ್ಯವಿದೆ’ ಎಂದು ಎನ್‌ಸಿಬಿ ತಿಳಿಸಿತು.

ಸೆಪ್ಟೆಂಬರ್ 9ರವರೆಗೆ ಪರಿಹಾರ್‌ನನ್ನು ಎನ್‌ಸಿಬಿ ವಶಕ್ಕೆ ಒಪ್ಪಿಸಲಾಯಿತು.

ಮುಂಬೈನಲ್ಲಿ ಇಬ್ಬರು ಮಾದಕ‍ಪದಾರ್ಥ ದಲ್ಲಾಳಿಗಳನ್ನು ಎನ್‌ಸಿಬಿ ಬಂಧಿಸಿ, ಮತ್ತೊಬ್ಬನನ್ನು ವಶಕ್ಕೆ ಪಡೆದಿತ್ತು. ಸುಶಾಂತ್‌ ಅವರ ಗೆಳತಿ ರಿಯಾ ಜತೆಗೆ ಬಂಧಿತ ಅಬ್ದುಲ್ ಬಾಸಿತ್ ಪರಿಹಾರ್ ಸಂಪರ್ಕ ಹೊಂದಿದ್ದ ಎಂಬ ಆರೋಪವಿದೆ.

ರಿಯಾ ಮತ್ತು ಶೋವಿಕ್ ಅವರ ಮೊಬೈಲ್ ಚಾಟ್‌ಗಳಲ್ಲಿ ಉಲ್ಲೇಖಗೊಂಡ ವ್ಯಕ್ತಿಯೊಂದಿಗೆ ಪರಿಹಾರ್ ಸಂಪರ್ಕ ಹೊಂದಿದ್ದ ಅಂಶ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದಕ ಪದಾರ್ಥ‌ ಖರೀದಿ, ಪೂರೈಕೆ ಹಾಗೂ ಬಳಕೆಯ ಅಂಶಗಳು ಚಾಟ್‌ಗಳಲ್ಲಿ ಉಲ್ಲೇಖವಾಗಿದ್ದು, ಜಾರಿ ನಿರ್ದೇಶನಾಲಯವು ಎನ್‌ಸಿಬಿ ಜತೆ ಈ ಮಾಹಿತಿಯನ್ನು ಹಂಚಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT