ಶುಕ್ರವಾರ, ಸೆಪ್ಟೆಂಬರ್ 17, 2021
30 °C

‘ಮಹಾರಾಷ್ಟ್ರ ಸದನ’ ನಿರ್ಮಾಣ ಹಗರಣ: ಛಗನ್‌ ಭುಜಬಲ್‌ ದೋಷಮುಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೆಹಲಿಯಲ್ಲಿನ ‘ಮಹಾರಾಷ್ಟ್ರ ಸದನ’ ನಿರ್ಮಾಣದ ಹಗರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ನಾಯಕ ಮತ್ತು ಸಚಿವ ಛಗನ್‌ ಭುಜಬಲ್‌ ಹಾಗೂ ಇತರ ಏಳು ಮಂದಿಯನ್ನು ವಿಶೇಷ ನ್ಯಾಯಾಲಯ ಗುರುವಾರ ದೋಷಮುಕ್ತಗೊಳಿಸಿದೆ.

ತಮ್ಮ ವಿರುದ್ಧ ಮೊಕದ್ದಮೆ ದಾಖಲಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಇವರು ಪ್ರತಿಪಾದಿಸಿದ್ದರು. ಭುಜಬಲ್‌ ಅವರ ಜತೆಗೆ, ಅವರ ಪುತ್ರ ಪಂಕಜ್‌, ಸೋದರ ಸಂಬಂಧಿ ಸಮೀರ್‌ ಮತ್ತು ಇತರ ಐವರನ್ನು ಖುಲಾಸೆಗೊಳಿಸಲಾಗಿದೆ.

ಭುಜಬಲ್‌ ಅವರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ತಪ್ಪು ಲೆಕ್ಕಾಚಾರದಿಂದ ಕೂಡಿವೆ ಎಂದು ಭುಜಬಲ್‌ ಅವರ ವಕೀಲರಾದ ಪ್ರಸಾದ್‌ ಢಾಕೆಫಾಲ್ಕರ್‌, ಸಜಲ್‌ ಯಾದವ್ ಮತ್ತು ಸುದರ್ಶನ್‌ ಖವಾಸೆ ಪ್ರತಿಪಾದಿಸಿದರು.

2016ರಲ್ಲಿ ಸಾವಿರಾರು ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರೂ ವಿಚಾರಣೆ ನಡೆಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ಅವರು ವಾದಿಸಿದರು.

ಭುಜಬಲ್‌ ಮತ್ತು ಅವರ ಕುಟುಂಬದ ಸದಸ್ಯರು ನಿರ್ಮಾಣ ಕಂಪನಿಯ ಕೆ.ಎಸ್‌. ಚಮಂಕಾರ್‌ ಎಂಟರ್‌ಪ್ರೈಸಸ್‌ನಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಹೀಗಾಗಿ, ಅವರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪರ ವಕೀಲರು ವಾದಿಸಿದ್ದರು. 

2005–06ರಲ್ಲಿನ ಪ್ರಕರಣ ಇದಾಗಿದ್ದು, ಛಗನ್‌ ಭುಜಬಲ್‌ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ನಿರ್ಮಾಣದ ಗುತ್ತಿಗೆಯನ್ನು ಕಂಪನಿಯೊಂದಕ್ಕೆ ನೀಡಿದ್ದರು. ಗುತ್ತಿಗೆ ಪಡೆದ ಕಂಪನಿ ಶೇಕಡ 80ರಷ್ಟು ಲಾಭ ಮಾಡಿಕೊಂಡಿದೆ. ಆದರೆ, ಸರ್ಕಾರದ ಸುತ್ತೋಲೆ ಅನ್ವಯ ಶೇಕಡ 20ರಷ್ಟು ಮಾತ್ರ ಗುತ್ತಿಗೆದಾರರು ಲಾಭ ಮಾಡಿಕೊಳ್ಳಲು ಅವಕಾಶವಿದೆ ಎಂದು ಎಸಿಬಿ ಆರೋಪಿಸಿತ್ತು.

ಮಹಾರಾಷ್ಟ್ರ ಸದನವನ್ನು ಆರಂಭದಲ್ಲಿ ₹13.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ನಂತರ, ನಿರ್ಮಾಣದ ವೆಚ್ಚದ ಮೊತ್ತವನ್ನು ₹50 ಕೋಟಿಗೆ ಹೆಚ್ಚಿಸಲಾಯಿತು. ಗುತ್ತಿಗೆ ಪಡೆದ ಚಮಂಕಾರ್ಸ್‌ ಕಂಪನಿಯಿಂದ ಭುಜಬಲ್‌ ಅವರಿಗೆ ₹13.5 ಕೋಟಿ ಕಿಕ್‌ಬ್ಯಾಕ್‌ ದೊರೆತಿದೆ ಎಂದು ಎಸಿಬಿ ಆರೋಪಿಸಿತ್ತು. ‘ಮಹಾರಾಷ್ಟ್ರ ಸದನ’ ಮತ್ತು ಲೋಕೋಪಯೋಗಿ ಇಲಾಖೆಯ ಇತರ ಕಾಮಗಾರಿಗಳಿಂದ ಭುಜ್‌ಬಲ್‌ ಅವರು ₹190 ಕೋಟಿ ಲಾಭ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.