ಮಂಗಳವಾರ, ಮೇ 11, 2021
27 °C
ಬಂಗಾಳದ ಅಲ್ಲಲ್ಲಿ ಗೊಂದಲ; ಅಸ್ಸಾಂನಲ್ಲಿ ಸರಾಗ

ಪಶ್ಚಿಮ ಬಂಗಾಳದಲ್ಲಿ ಶೇ 80ರಷ್ಟು ಮತ್ತು ಅಸ್ಸಾಂನಲ್ಲಿ ಶೇ 73ರಷ್ಟು ಮತದಾನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ/ಗುವಾಹಟಿ: ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರ ಹಾಗೂ ಅಸ್ಸಾಂನ 47 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಮೊದಲ ಹಂತದ ಮತನಾನ ನಡೆಯಿತು. ಅಸ್ಸಾಂನಲ್ಲಿ ಸಂಜೆ 6 ಗಂಟೆವರೆಗೆ ಶೇ 72.46 ಹಾಗೂ ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆವರೆಗೆ ಶೇ 79.79ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ, ಮತದಾನ ಶಾಂತಿಯುತವಾಗಿತ್ತು. ಅಸ್ಸಾಂನಲ್ಲಿ ಹಿಂಸಾಚಾರದ ಘಟನೆ ವರದಿಯಾಗಿಲ್ಲ. 

ಬಂಗಾಳದ ಮಿಡ್ನಾಪುರ ಜಿಲ್ಲೆಯ ಕೇಶಿಯಾರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗಂಪುರದ ಮನೆಯೊಂದರಲ್ಲಿ  ಮಂಗಳ್ ಸೊರೆನ್ ಎಂಬುವರ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಅವರು ತಮ್ಮ ಪಕ್ಷದ ಕಾರ್ಯಕರ್ತ, ಟಿಎಂಸಿ ಕಾರ್ಯಕರ್ತರು ಅವರನ್ನು ಹೊಡೆದು ಸಾಯಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಘಟನೆ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಶನಿವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗುವ ಮೊದಲೇ ಪೂರ್ವ ಮೈನಿಪುರ ಜಿಲ್ಲೆಯ ಪೊಟಾಶ್‌ಪುರ ಮತ್ತು ಖೇಜೂರಿಯಲ್ಲಿ ರಾಜಕೀಯ ಹಿಂಸಾಚಾರದ ಘಟನೆ ನಡೆದಿವೆ. ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಾಲ್ಬೋನಿ ಎಂಬಲ್ಲಿ ಸಿಪಿಎಂ ಅಭ್ಯರ್ಥಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಂಟಾಯಿ ದಕ್ಷಿಣ ಕ್ಷೇತ್ರದ ಮಜಿನಾ ಎಂಬಲ್ಲಿ ಅಕ್ರಮ ಮತದಾನ ನಡೆಯುತ್ತಿದೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಟಿಎಂಸಿಗೆ ಮತ ಚಲಾಯಿಸಿದರೆ, ವಿವಿ ಪ್ಯಾಟ್ ಯಂತ್ರದಲ್ಲಿ ಬಿಜೆಪಿ ಚಿಹ್ನೆ ತೋರಿಸುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಚುನಾವಣಾ ಆಯೋಗವನ್ನು ಟಿಎಂಸಿ ಒತ್ತಾಯಿಸಿದೆ.

‘ಆಘಾತಕಾರಿ! ಕೇವಲ 5 ನಿಮಿಷಗಳ ಅಂತರದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೇಗೆ ಅರ್ಧಕ್ಕೆ ಇಳಿಯಿತು ಎಂಬುದನ್ನು ನೀವು ವಿವರಿಸಬಹುದೇ’ ಎಂದು ಆಯೋಗವನ್ನು ಟಿಎಂಸಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಸಹಾಯ ಕೇಳಿದರೇ ಮಮತಾ? ಆಡಿಯೊ ಕ್ಲಿಪ್ ಬಹಿರಂಗ: ನಂದಿಗ್ರಾಮದಲ್ಲಿ ತಮ್ಮ ಗೆಲುವಿಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳೀಯ ಬಿಜೆಪಿ ಮುಖಂಡ ಪ್ರಳಯ್ ಪಾಲ್ ಅವರನ್ನು ಕೋರಿದ್ದರು ಎನ್ನಲಾದ ಧ್ವನಿಮುದ್ರಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಷ್ ವಿಜಯವರ್ಗೀಯ ಅವರ ನೇತೃತ್ವದ ನಿಯೋಗವು ರಾಜ್ಯ ಚುನಾವಣಾ ಅಧಿಕಾರಿಯನ್ನು ಭೇಟಿ ಮಾಡಿ ಆಡಿಯೊ ಕ್ಲಿಪ್ ಹಸ್ತಾಂತರಿಸಿತು. ಮುಖ್ಯಮಂತ್ರಿ ಮಮತಾ ಅವರು ಫಲಿತಾಂಶದ ಮೇಲೆ ಪ್ರಭಾವ ಬೀರಲು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಿಯೋಗ ಆರೋಪಿಸಿದೆ.

ಆಡಿಯೊ ಕ್ಲಿಪ್‌ನ ನೈಜತೆಯನ್ನು ಟಿಎಂಸಿ ಪ್ರಶ್ನೆ ಮಾಡಿದೆ. ಆದರೆ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಪ್ರಳಯ್ ಪಾಲ್ ಅವರನ್ನು ಮತ್ತೆ ಪಕ್ಷಕ್ಕೆ ಮರಳುವಂತೆ ಕೋರುವುದರಲ್ಲಿ ತಪ್ಪಿಲ್ಲ ಎಂದು ಟಿಎಂಸಿ ವಾದಿಸಿದೆ.

ಮಮತಾ ಅವರು ಖುದ್ದಾಗಿ ತಮಗೆ ಕರೆ ಮಾಡಿ, ನಂದಿಗ್ರಾಮದಲ್ಲಿ ಗೆಲುವಿಗೆ ಸಹಕಾರ ನೀಡುವಂತೆ ಕೇಳಿದರು ಎಂದು ಪಾಲ್ ಆರೋಪಿಸಿದ್ದಾರೆ. ಆದರೆ ತಾವು ಅಧಿಕಾರಿ ಅವರಿಗೆ ಮೋಸ ಮಾಡುವುದಿಲ್ಲ ಎಂದು ಮಮತಾಗೆ ತಿಳಿಸಿದೆ ಎಂದು ಪಾಲ್ ಹೇಳಿದ್ದಾರೆ.

ಹಣಹಂಚಿಕೆ: ದೂರು: ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಣ ವಿತರಿಸುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ಬಹಿರಂಗವಾಗಿದ್ದು, ಬಿಜೆಪಿಯು ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.

ಟಿಎಂಸಿ ಈ ಘಟನೆಯನ್ನು ನಿರಾಕರಿಸಿದೆ. ವಿಡಿಯೊವನ್ನು ತಿರುಚಲಾಗಿದೆ ಎಂದು ಆರೋಪಿಸಿದೆ. ಬಿಜೆಪಿ ಮುಖಂಡರು ಮತದಾರರಿಗೆ ಹಣ ಹಂಚಲು ಹೊರಗಿನವರನ್ನು ಕರೆ ತರುತ್ತಿದ್ದಾರೆ ಎಂದು ಆರೋಪಿಸಿದೆ.

ಸ್ಥಳೀಯರೇ ಮತಗಟ್ಟೆ ಏಜೆಂಟ್ ಆಗಿರಲು ಮನವಿ: ಚುನಾವಣೆ ನಡೆಯುವ ಮತಗಟ್ಟೆಯಲ್ಲಿ ಮತದಾರರಾಗಿರುವ ವ್ಯಕ್ತಿಯನ್ನು ಮಾತ್ರವೇ ಆ ಮತಗಟ್ಟೆಯ ಏಜೆಂಟ್ ಆಗಿ ನೇಮಿಸುವಂತೆ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ನೇತೃತ್ವದ ನಿಯೋಗವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಯಾವುದೇ ಪಕ್ಷವು ವಿಧಾನಸಭಾ ಕ್ಷೇತ್ರದ ಮತದಾರನನ್ನು ಕ್ಷೇತ್ರದೊಳಗಿನ ಯಾವುದೇ ಬೂತ್‌ಗೆ ಏಜೆಂಟ್ ಆಗಿ ನೇಮಿಸಬಹುದು ಎಂದು ಕಳೆದ ವಾರವಷ್ಟೇ ಆಯೋಗ ತಿಳಿಸಿತ್ತು.

ಸ್ಥಳೀಯರಲ್ಲದ ಕಾರಣ, ಚುನಾವಣೆಯಲ್ಲಿ ಮತದಾರರನ್ನು ಗುರುತಿಸಲು ಮತಗಟ್ಟೆ ಏಜೆಂಟ್‌ಗಳಿಗೆ ಸಾಧ್ಯವಾಗಿಲ್ಲ ಎಂದು ನಿಯೋಗ ತಿಳಿಸಿದೆ.

ಗುಂಡಿಕ್ಕುವ ಬೆದರಿಕೆ: ಪುರುಲಿಯಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸುಜೋಯ್ ಬಂಡೋಪಾಧ್ಯಾಯ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ದೀಪಕ್ ಬೌರಿ ಅವರ ನಡುವೆ ಶನಿವಾರ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಸುಜೋಯ್‌ ಅವರು ಬೌರಿ ಅವರಿಗೆ ಗುಡಿಕ್ಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಭಾರಿ ಜನರನ್ನು ಸೇರಿಸಿದ ಟಿಎಂಸಿ ವಿರುದ್ಧ ಬೌರಿ ಅವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.  ಈ ವಾಗ್ವಾದದ ವಿಡಿಯೊ ವೈರಲ್ ಆಗಿದೆ. ಬಂಡೋಪಾಧ್ಯಾಯ ಅವರು ಆರೋಪವನ್ನು ತಳ್ಳಿಹಾಕಿದ್ದಾರೆ.

ಸೌಟು ಹಿಡಿದು ಎದುರಿಸಿ: ಮಮತಾ ಕರೆ: ಪಶ್ಚಿಮ ಬಂಗಾಳಕ್ಕೆ ಬಿಜೆಪಿಯು ಹೊರಗಿನಿಂದ ಗೂಂಡಾಗಳನ್ನು ಕರೆಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೌಟು ಹಿಡಿದು ಅವರನ್ನು ಎದುರಿಸಿ ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಾರಾಯಣಗಢ ಹಾಗೂ ಪಿಂಗಲಾದಲ್ಲಿ ಎರಡು ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸುವೇಂದು ಅಧಿಕಾರಿ ಮತ್ತವರ ಕುಟುಂಬವನ್ನು ದೇಶದ್ರೋಹಿಗಳು ಎಂದು ಕರೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು