ಸೋಮವಾರ, ಮೇ 17, 2021
21 °C
ನೂತನ ಕೃಷಿ ಕಾನೂನಿನ ಕುರಿತು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಾಗ್ದಾಳಿ

ಕೇಂದ್ರದಿಂದ ರೈತರ ಜೀವಾಳದ ಮೇಲೆಯೇ ದಾಳಿ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ‘ಕೇಂದ್ರ ಸರ್ಕಾರ ನೂತನವಾಗಿ ಜಾರಿ ತಂದಿರುವ ಕೃಷಿ ಕಾನೂನುಗಳು ರೈತರ ಜೀವಾಳದ ಮೇಲೆಯೇ ದಾಳಿ ನಡೆಸುತ್ತಿವೆ. ಇವುಗಳು ದೇಶದ ಬುನಾದಿಯನ್ನೇ ದುರ್ಬಲಗೊಳಿಸುತ್ತವೆ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪಂಜಾಬ್‌ನಲ್ಲಿ ‘ಸ್ಮಾರ್ಟ್‌ ಹಳ್ಳಿ ಅಭಿಯಾನ’ ಕಾರ್ಯಕ್ರಮವನ್ನು ಆನ್‌ಲೈನ್‌ ಮುಖಾಂತರ ಉದ್ಘಾಟಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಮೂರು ಕೃಷಿ ಕಾನೂನುಗಳು ದೇಶದ ರೈತರ ಜೀವಾಳದ ಮೇಲಿನ ದಾಳಿಯಾಗಿದ್ದು, ಅವರ ರಕ್ತವನ್ನೇ ಹೀರಲಿದೆ. ಇದನ್ನು ದೇಶದ ರೈತರೂ ಅರ್ಥಮಾಡಿಕೊಂಡಿದ್ದಾರೆ. ಪಂಜಾಬ್‌ ಹಾಗೂ ಹರಿಯಾಣದಲ್ಲಿ ನಡೆದಂಥ ಟ್ರ್ಯಾಕ್ಟರ್‌ ರ್‍ಯಾಲಿ ಸಂದರ್ಭದಲ್ಲಿ ಈ ಕಾನೂನಿನ ಮೇಲಿದ್ದ ರೈತರ ಆಕ್ರೋಶ ಬಹಿರಂಗವಾಗಿತ್ತು’ ಎಂದರು.

‘ಈ ಕಾನೂನಿನ ಕುರಿತು ಚರ್ಚಿಸಲು ಪಂಜಾಬ್‌ ಸರ್ಕಾರ ಅ.19ರಂದು ವಿಶೇಷ ಅಧಿವೇಶನ ಕರೆದಿದ್ದು, ಇದು ಸ್ವಾಗತಾರ್ಹ ನಡೆ. ಶಾಸಕರೇ ಈ ಕಾನೂನಿನ ಬಗ್ಗೆ ನಿರ್ಧರಿಸಲಿದ್ದಾರೆ. ದೇಶದ ಬುನಾದಿಯನ್ನು ಕೇಂದ್ರ ಸರ್ಕಾರ ಈ ರೀತಿ ದುರ್ಬಲಗೊಳಿಸಿದರೆ, ಇಡೀ ದೇಶವೇ ದುರ್ಬಲವಾಗಲಿದೆ. ಕಾಂಗ್ರೆಸ್‌ ಪಕ್ಷವು ದೇಶದ ಬುನಾದಿಯನ್ನು ಸದೃಢಗೊಳಿಸಲು ಹಾಗೂ ರಕ್ಷಿಸಲು ಹೋರಾಡುತ್ತದೆ. ಇದು ನಮಗೂ ಹಾಗೂ ಕೇಂದ್ರ ಸರ್ಕಾರಕ್ಕೂ ಇರುವ ವ್ಯತ್ಯಾಸ’ ಎಂದರು. 

‘ಈ ಕಾನೂನುಗಳು ರೈತರ ಪರವಾಗಿದ್ದರೆ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಇದರ ಕುರಿತು ಚರ್ಚಿಸಲು ಏಕೆ ಅವಕಾಶ ನೀಡಿಲ್ಲ. ಚರ್ಚೆಗೆ ಹೆದರುವಂಥ ಕಾರಣ ಏನಿತ್ತು. ಚರ್ಚೆ ನಡೆದಿದ್ದರೆ, ಕಾನೂನುಗಳ ಬಗ್ಗೆ ದೇಶದ ಜನತೆಯೇ ನಿರ್ಧರಿಸುತ್ತಿದ್ದರು’ ಎಂದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು