ಗುರುವಾರ , ಮಾರ್ಚ್ 23, 2023
30 °C

ಚಿಕಿತ್ಸೆ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶ: ಸುಶಾಂತ್ ಸಾವಿನ ಪ್ರಕರಣಕ್ಕೆ ಹೊಸ ತಿರುವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ತಾವು ಪಡೆಯುತ್ತಿರುವ ಚಿಕಿತ್ಸೆ ಹಾಗೂ ಔಷಧಕ್ಕೆ ಸಂಬಂಧಿಸಿದಂತೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಸಹೋದರಿಗೆ ವಾಟ್ಸ್‌ಆ್ಯಪ್ ನಲ್ಲಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಸುಶಾಂತ್ ಅವರ ಮಾನಸಿಕ ಆರೋಗ್ಯದ ಬಗ್ಗೆ ಕುಟುಂಬದವರಿಗೆ ಚೆನ್ನಾಗಿ ಗೊತ್ತಿತ್ತು ಎಂಬುದು ಬಯಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ಪಾಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಸುಶಾಂತ್ ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಅವರ ತಂದೆ ಹೇಳಿಕೆ ನೀಡಿದ್ದಾರೆ. ಜೊತೆಗೆ ಮಗ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕುಟುಂಬದವರಿಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಆದರೆ ವಾಟ್ಸ್‌ಆ್ಯಪ್ ನಲ್ಲಿ ಸಹೋದರಿ ಪ್ರಿಯಾಂಕಾ ಜೊತೆ ನಡೆಸಿರುವ ಚರ್ಚೆ, ಸುಶಾಂತ್ ಅವರು ವೈದ್ಯರಿಂದ ಸಲಹೆ ಪಡೆಯದೆ, ಕುಟುಂಬದವರು ತಿಳಿಸಿದ ಔಷಧಗಳನ್ನೇ ತೆಗೆದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ.

ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದ ನಟಿ ರಿಯಾ ಚಕ್ರವರ್ತಿ ಅವರು ಜೂನ್ 8ರಂದು ಸುಶಾಂತ್ ಮನೆಯಿಂದ ಹೊರನಡೆದಿದ್ದರು. ಅದಾದ ಎಂಟು ದಿನಗಳ ನಂತರ ಸುಶಾಂತ್ ಮೃತಪಟ್ಟಿದ್ದರು. ಹಾಗಾಗಿ, ನಟನ ಮನೆಯವರು ರಿಯಾ ಹಾಗೂ ಆಕೆಯ ಕುಟುಂಬದವರು ತಮ್ಮ ಮಗನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಈ ಆರೋಪಗಳನ್ನು  ತಳ್ಳಿಹಾಕಿದ್ದ ರಿಯಾ,  'ಸುಶಾಂತ್ ಗಾಂಜಾ ಸೇವಿಸುತ್ತಿದ್ದರು. ನಾನು ಅವರನ್ನು ತಡೆಯಲು ಪ್ರಯತ್ನಿಸಿದ್ದೆ. ನನ್ನ ಜೀವನದಲ್ಲಿ ಎಂದಿಗೂ ಮಾದಕವಸ್ತು ಸೇವಿಸಿಲ್ಲ. ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧಳಿದ್ದೇನೆ' ಎಂದು ತಿಳಿಸಿದ್ದರು.

ಸದ್ಯ ಸುಪ್ರೀಂ ಕೋರ್ಟ್‌ ಆದೇಶದಂತೆ  ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ರಿಯಾ ಹಾಗೂ ಸುಶಾಂತ್ ಜೊತೆ ವಾಸವಿದ್ದ ಸ್ನೇಹಿತ, ಮನೆಗೆಲಸದವರನ್ನು ವಿಚಾರಣೆಗೆ ಒಪಡಿಸಿದೆ.

ಮಾದಕವಸ್ತು ನಿಯಂತ್ರಣ ದಳ ಮತ್ತು ಜಾರಿ ನಿರ್ದೇಶನಾಲಯವೂ ಪ್ರಕರಣದ ತನಿಖೆ ಕೈಗೆತ್ತಿಕೊಂಡಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು