ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ನಿತೀಶ್‌ ಕುಮಾರ್‌ ಅವರಷ್ಟು ದುರ್ಬಲ ಸಿಎಂ ಮತ್ತೊಬ್ಬರಿಲ್ಲ: ತೇಜಸ್ವಿ

Last Updated 13 ಮಾರ್ಚ್ 2021, 14:44 IST
ಅಕ್ಷರ ಗಾತ್ರ

ಪಟ್ನಾ: ರಾಜ್ಯದಲ್ಲಿ ಸಚಿವರೊಬ್ಬರು ತಮ್ಮ ಸೋದರ ಸಂಬಂಧಿಯೊಬ್ಬರ ಮೂಲಕ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾರೆಎಂದು ಆರೋಪಿಸಿ ಬಿಹಾರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌, ದೇಶದಲ್ಲಿ ನಿತೀಶ್‌ ಕುಮಾರ್‌ ಅವರಷ್ಟು ದುರ್ಬಲ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ ಎಂದು ಟೀಕಿಸಿದ್ದಾರೆ.

ʼಸಚಿವರ ವಿರುದ್ಧ ಮದ್ಯ ಕಳ್ಳ ಸಾಗಾಣೆ ಮಾಡಿದ ಆರೋಪ ಕೇಳಿಬಂದಿರುವುದು ಗಂಭೀರವಾದ ವಿಚಾರವಾಗಿದೆ. ಸರ್ಕಾರವು ಈ ವಿಚಾರವನ್ನು ಸದನದಲ್ಲಿ ಚರ್ಚಿಸಬೇಕು. ತಮ್ಮ ಸಚಿವರ ವಿರುದ್ಧ ಗಂಭೀರವಾದ ಆರೋಪ ಕೇಳಿಬಂದಿರುವಾಗ ನಿತೀಶ್‌ ಕುಮಾರ್‌ ಸದನಕ್ಕೆ ಗೈರಾಗಿದ್ದಾರೆ. ಈ ಸರ್ಕಾರ ಭಯಭೀತವಾಗಿದೆ. ಅವರು ವಿರೋಧ ಪಕ್ಷಗಳಿಗೆ ಮಾತನಾಡುವ ಅವಕಾಶ ನೀಡುತ್ತಿಲ್ಲ. ನಾವು ದಾಖಲೆಗಳನ್ನು ತೋರಿಸುತ್ತೇವೆ ಎಂದು ಹೆದರಿದ್ದಾರೆ. ದೇಶದಲ್ಲಿ ನಿತೀಶ್‌ ಕುಮಾರ್‌ ಅವರಷ್ಟು ದುರ್ಬಲ ಮುಖ್ಯಮಂತ್ರಿ ಇನ್ನೊಬ್ಬರಿಲ್ಲʼ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ತಾರ್ಕಿಶೋರ್‌ ಪ್ರಸಾದ್‌ ವಿರುದ್ಧವೂ ವಾಗ್ದಾಳಿ ನಡೆಸಿರುವ ಯಾದವ್‌, ʼಉಪಮುಖ್ಯಮಂತ್ರಿಹುದ್ದೆ ಸಾಂವಿಧಾನಿಕವಲ್ಲ. ಸಭಾಪತಿಯವರು ನನಗೆ ಮಾತನಾಡಲು ಅವಕಾಶ ನೀಡಿದರೆ ಅವರೇಕೆ (ಪ್ರಸಾದ್‌) ಅಡ್ಡಿಪಡಿಸುತ್ತಾರೆ. ಸಭಾಪತಿಗೆ ಆದೇಶ ನೀಡುವ ಅಧಿಕಾರವನ್ನು ಅವರಿಗೆ ಯಾರು ಕೊಟ್ಟರು? ಸಂವಿಧಾನದ ಬಗ್ಗೆ ಜ್ಞಾನ ಇಲ್ಲದವರನ್ನು ಈ ಸರ್ಕಾರ ಮಂತ್ರಿಗಳನ್ನಾಗಿ ಮಾಡಿದೆʼ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ರಾಜ್ಯ ಸರ್ಕಾರವು ಬಿಹಾರವನ್ನು ಎಲ್ಲ ಆಯಾಮದಿಂದಲೂ ನಾಶ ಮಾಡುತ್ತಿದೆ ಎಂದು ಆರ್‌ಜೆಡಿ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಹಣದುಬ್ಬರ ಅಧಿಕವಾಗಿದೆ. ನಿರುದ್ಯೋಗ ಸ್ಥಿತಿ ಉತ್ತುಂಗದಲ್ಲಿದೆ. ರೈತರಿಂದ ವಿದ್ಯಾರ್ಥಿಗಳವರೆಗೆ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಮಹಿಳೆಯರು ಸುರಕ್ಷಿತವಾಗಿಲ್ಲ. ನಮ್ಮ ಚಿಂತನೆಗಳನ್ನು ಸದನದಲ್ಲಿ ತೆರೆದಿಡಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಇದು ಸರ್ವಾಧಿಕಾರ. ವಿಧಾನಸಭೆಯು ಜನತಾದಳ ಮತ್ತು ಬಿಜೆಪಿಯ ಕಚೇರಿಯಾಗಿ ಮಾರ್ಪಟ್ಟಿದೆʼ ಎಂದುಯಾದವ್ ಕುಟುಕಿದ್ದಾರೆ.

ತೇಜಸ್ವಿ, ತೇಜ್‌ ಪ್ರತಾಪ್‌ ಯಾದವ್‌ ಸೇರಿದಂತೆ ಆರ್‌ಜೆಡಿ ಶಾಸಕರು ಇಂದು ಬಿಹಾರ ವಿಧಾನಸಭೆಯಿಂದ ರಾಜಭವನದತ್ತ ಪ್ರತಿಭಟನಾ ರ‍್ಯಾಲಿ ನಡೆಸಿದ್ದರು. ರಾಜ್ಯಪಾಲರಿಗೆಸಮಸ್ಯೆಗಳ ಬಗ್ಗೆ ಮನವಿಸಲ್ಲಿಸಿದ್ದರು.ವಿಶೇಷವೆಂದರೆ, ರಾಜ್ಯದ ಸಚಿವ ರಾಮ್‌ಸೂರತ್‌ ರಾಯ್‌ ಅವರವಿರುದ್ಧ ಕೇಳಿಬಂದಿರುವ ಅಕ್ರಮ ಮದ್ಯ ಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆಬಿಹಾರ ವಿಧಾನಸಭೆಯಲ್ಲಿ ಕೋಲಾಹಲವೆದ್ದಿತ್ತು. ರಾಯ್‌ ಅವರ ಸಹೋದರ ಮುಜಾರ್‌ಪುರದಲ್ಲಿ ನಡೆಸುತ್ತಿರುವ ಶಾಲೆಯಿಂದ ಈ ವಾರದ ಆರಂಭದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಅದಾದ ಬಳಿಕ ರಾಜ್ಯದಲ್ಲಿ ವಿವಾದ ಭುಗಿಲೆದ್ದಿದೆ.

2016 ರಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ಮದ್ಯಸೇವನೆಯನ್ನು ನಿಷೇಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT