ಶನಿವಾರ, ಫೆಬ್ರವರಿ 4, 2023
17 °C

ಗೋವಾದಲ್ಲಿ ಇನ್ಮುಂದೆ ಸರ್ಕಾರಿ ಕೆಲಸ ಬೇಕಾದರೆ ಖಾಸಗಿ ಕೆಲಸ ಮಾಡಿರಲೇಬೇಕು!

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಖಾಸಗಿ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂಬ ನಿಯಮವನ್ನು ತರಲು ಗೋವಾ ಸರ್ಕಾರ ಮುಂದಾಗಿದೆ.

ಹೌದು ಈ ಬಗ್ಗೆ ಸ್ವತಃ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದು, ‘ನುರಿತ ಮತ್ತು ಪ್ರತಿಭಾವಂತ ಉದ್ಯೋಗಿಗಳನ್ನು ಸರ್ಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಈ ನಿರ್ಧಾರ ಮಾಡಿರುವುದಾಗಿ’ ಹೇಳಿದ್ದಾರೆ.

ಪಣಜಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇನ್ಮುಂದೆ ನೇರ ಸರ್ಕಾರಿ ಉದ್ಯೋಗ ನೀಡುವುದಿಲ್ಲ. ಪದವಿ ಪಾಸಾಗುವ ಮೊದಲು ಅನೇಕರು ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಉದಾಹರಣೆಗಳಿವೆ. ಪಿಎಸ್‌ಐ ಹುದ್ದೆಗಳಲ್ಲಿ ಇದೇ ಪ್ರವೃತ್ತಿ ಇತ್ತು. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು’ ಎಂದು ಹೇಳಿದ್ದಾರೆ.

ಸರ್ಕಾರಿ ನೇಮಕಾತಿ ಸಮಯದಲ್ಲಿ, ಅಭ್ಯರ್ಥಿಯ ಹಿಂದಿನ ಕೆಲಸದ ಅನುಭವವನ್ನು ಕಡ್ಡಾಯವಾಗಿ ನೋಡಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಯುವಕರಿಗೆ ನಾವು ನೇರವಾಗಿ ಉದ್ಯೋಗಗಳನ್ನು ನೀಡುವುದನ್ನು ನಿಲ್ಲಿಸಲು ಯೋಜಿಸುತ್ತಿದ್ದೇವೆ. ಇದರಿಂದ ನಮಗೆ ನುರಿತ ಮಾನವ ಸಂಪನ್ಮೂಲ ಸಿಗುತ್ತದೆ. ಇದಕ್ಕಾಗಿ ನೇಮಕಾತಿ ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಾಯಿಸಲು ನಿರ್ಧರಿಸಿದ್ದೇವೆ. ಕಳೆದ 30 ವರ್ಷಗಳಿಂದ ಅದು ಬದಲಾಗಿರಲಿಲ್ಲ ಎಂದು ಸಾವಂತ್ ಹೇಳಿದ್ದಾರೆ.

ಗೋವಾ ಸರ್ಕಾರವು ಒಂದೆಡೆ ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿದೆ. ಇನ್ನೊಂದೆಡೆ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಯೋಜಿಸಿದೆ. ಮಾನವ ಸಂಪನ್ಮೂಲದ ಪ್ರತಿಭೆಯನ್ನು ಖಾಸಗಿ ಮತ್ತು ಸರ್ಕಾರ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ನಾವು ಯೋಚಿಸುತ್ತಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ.

ಪದವೀಧರರು ಮತ್ತು ಇತರರು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಹೆಚ್ಚುವರಿ ಕೋರ್ಸ್‌ಗಳನ್ನು ಕಲಿಯಬೇಕು ಎಂದು ಮುಖ್ಯಮಂತ್ರಿ ಸಾವಂತ್ ಯುವಕರಿಗೆ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು