ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರನ ವಜಾ ಪ್ರಕರಣ: ಸಿವಿಲ್‌ ಕೋರ್ಟ್ ವ್ಯಾಪ್ತಿಗೆ ಬರದು –ಸುಪ್ರೀಂ ಕೋರ್ಟ್

Last Updated 10 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಕೈಗಾರಿಕಾ ವಿವಾದ ಕಾಯ್ದೆಯಡಿ ನೌಕರನನ್ನು ವಜಾ ಮಾಡಿದ್ದ ಪ್ರಕರಣದ ವಿಚಾರಣೆಯು ಸಿವಿಲ್ ಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಶನಿವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಆರ್‌.ಸುಭಾಷ್ ರೆಡ್ಡಿ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ನ್ಯಾಯಪೀಠವು ಈ ಸಂಬಂಧ ಹಿಮಾಚಲ ಪ್ರದೇಶ ಹೈಕೋರ್ಟ್‌ ತಳೆದಿದ್ದ ನಿಲುವನ್ನು ಎತ್ತಿಹಿಡಿಯಿತು.

ನೌಕರನನ್ನು ಮರು ನೇಮಿಸುವಂತೆ ಸ್ಥಳೀಯ ಸಿವಿಲ್‌ ಕೋರ್ಟ್‌,ರಾಜ್ಯ ವಿದ್ಯುತ್‌ ಮಂಡಳಿಗೆ ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ‘ಈ ಪ್ರಕರಣ ಸಿವಿಲ್‌ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿತ್ತು.

ಸಿವಿಲ್ ಕೋರ್ಟ್‌‌ನ ನಿರ್ದೇಶನವನ್ನು ಪ್ರಶ್ನಿಸಿದ್ದ ವಿದ್ಯುತ್ ಮಂಡಳಿ, ‘ಈ ಪ್ರಕರಣವು ಕಾರ್ಮಿಕ ನ್ಯಾಯಾಲಯದ ಪರಿಧಿಗೆ ಬರುತ್ತದೆ. ಸಿವಿಲ್‌ ಕೋರ್ಟ್‌ ವ್ಯಾಪ್ತಿಗಲ್ಲ’ ಎಂದು ಪ್ರತಿಪಾದಿಸಿತ್ತು.

ದಿನಗೂಲಿ ನೌಕರನನ್ನು ವಿದ್ಯುತ್ ಮಂಡಳಿಯು ಜನವರಿ 1, 1985ರಂದು ಸೇವೆಯಿಂದ ಕೈಬಿಟ್ಟಿತ್ತು. ನೌಕರ, ತಾನು 2,778 ದಿನ ಸೇವೆ ಸಲ್ಲಿಸಿದ್ದು, ಕಾಯಂಗೊಳ್ಳುವ ಹಕ್ಕು ಹೊಂದಿದ್ದೇನೆ ಎಂದು ವಾದಿಸಿದ್ದರು. ಆದರೆ, ವಿದ್ಯುತ್ ಮಂಡಳಿಯು ‘ನೌಕರ ನಿರಂತರವಾಗಿ 240ಕ್ಕೂ ಹೆಚ್ಚು ದಿನ ಕಾರ್ಯನಿರ್ವಹಿಸಿಲ್ಲ’ ಎಂದು ಹೇಳಿತ್ತು. ವಿಚಾರಣೆ ನಡೆಸಿದ್ದ ಸಿವಿಲ್‌ ಕೋರ್ಟ್‌ ಸೇವೆಯ ಸಕ್ರಮಕ್ಕೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ವಿದ್ಯುತ್ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಕೋರ್ಟ್ ವಜಾ ಮಾಡಿತ್ತು. ‘ವ್ಯಾಪ್ತಿಯು ಕಾಯ್ದೆ ಮತ್ತು ವಸ್ತುಸ್ಥಿತಿಯನ್ನು ಆಧರಿಸಿದೆ. ವಿಚಾರಣೆ ಆಗಲೇ ಸುದೀರ್ಘ ಕಾಲ ನಡೆದಿದೆ. ಈ ಹಂತದಲ್ಲಿ ಕಾರ್ಮಿಕ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗದು. ಸಿವಿಲ್‌ ಕೋರ್ಟ್ ಅಥವಾ ಕೈಗಾರಿಕಾ ನ್ಯಾಯಾಲಯದಿಂದ ಪರಿಹಾರ ಪಡೆಯುವ ಆಯ್ಕೆ ನೌಕರನಿಗಿದೆ’ ಎಂದೂ ಹೇಳಿತ್ತು.

ಕೈಗಾರಿಕ ವಿವಾದ ಕಾಯ್ದೆಯನ್ವಯ ಆಗಸ್ಟ್ 22, 2001ರಿಂದ ಅನ್ವಯಿಸಿ ದಿನಗೂಲಿ ನೌಕರನನ್ನು ಸೇವೆಯಿಂದ ಕೈಬಿಡಲಾಗಿತ್ತು. ವಿದ್ಯುತ್‌ ಮಂಡಳಿಯು ಕೆಳಹಂತದ ಗುಮಾಸ್ತ ಹುದ್ದೆಗೆ ಅವಕಾಶ ಕಲ್ಪಿಸಿದ್ದರೂ, ನೌಕರ ಸಕಾಲದಲ್ಲಿ ಸೇವೆಗೆ ವರದಿ ಮಾಡಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT