ಭಾನುವಾರ, ಮಾರ್ಚ್ 26, 2023
24 °C

ಪರಿಸರ ಸಂರಕ್ಷಣೆ ಕುರಿತ ಮೋದಿ ಭರವಸೆಗೆ ಜೈರಾಮ್‌ ರಮೇಶ್‌ ವ್ಯಂಗ್ಯ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘2070ರ ವೇಳೆಗೆ ಭಾರತವನ್ನು ಇಂಗಾಲ ಹೊರಸೂಸುವಿಕೆಯಿಂದ ಮುಕ್ತಗೊಳಿಸಲಾಗುವುದು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: 2070ರ ವೇಳೆಗೆ ಭಾರತ ‘ಇಂಗಾಲ ಹೊರಸೂಸುವಿಕೆ’ ಮುಕ್ತ: ಪ್ರಧಾನಿ ಮೋದಿ ಘೋಷಣೆ

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ‘ಸಿಒಪಿ26 ಹವಾಮಾನ ಶೃಂಗಸಭೆ‘ಯಲ್ಲಿ ಸೋಮವಾರ ಮಾತನಾಡಿದ್ದ ಪ್ರಧಾನಿ ಮೋದಿ, ‘ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿ ಪ್ಯಾರಿಸ್‌ ಒಪ್ಪಂದಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಏಕೈಕ ದೇಶವೆಂದರೆ ಭಾರತ’ ಎಂದು ಪ್ರತಿಪಾದಿಸಿದ್ದರು. ಅಲ್ಲದೆ, 2070ರ ವೇಳೆಗೆ ಭಾರತವನ್ನು ಇಂಗಾಲ ಹೊರಸೂಸುವಿಕೆಯಿಂದ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದರು.

ಮೋದಿ ಅವರ ಭರವಸೆಗಳನ್ನು ಜೈರಾಮ್‌ ರಮೇಶ್‌ ತಮ್ಮ ಟ್ವೀಟ್ ಮೂಲಕ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

‘ಗ್ಲಾಸ್ಗೋದಲ್ಲಿನ ಪ್ರಧಾನಿ ಮೋದಿ ಅವರ ಬೃಹತ್‌ ಘೋಷಣೆಗಳು ಒಂದು ವಿಷಯವಷ್ಟೆ. ಭಾರತದಲ್ಲಿ ಅದಕ್ಕೆ ಸಂಬಂಧಿಸಿದ ಕ್ರಮಗಳೇನು? ಪರಿಸರ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ, ಮಾನದಂಡಗಳನ್ನು ಸಡಿಲಗೊಳಿಸಲಾಗುತ್ತಿದೆ ಮತ್ತು ಜಾರಿ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ, ಇದು ವಾಸ್ತವ. ಅತ್ಯಂತ ದೂರದ 2070ಕ್ಕೆ ಇದು ದೊಡ್ಡ ಭರವಸೆಯಲ್ಲ,’ ಎಂದು ಅವರು ಹೇಳಿದ್ದಾರೆ.

‘ಹವಾಮಾನ ಬದಲಾವಣೆಯಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ವಿರುದ್ಧ ಭಾರತ ದೃಢವಾದ ಹೋರಾಟ ಕೈಗೊಂಡಿದೆ. ಈ ಹೋರಾಟದ ಫಲಿತಾಂಶವನ್ನು ಜಗತ್ತಿಗೆ ಭಾರತ ತೋರಿಸುವುದು’ ಎಂದು ಮೋದಿ ಗ್ಲಾಸ್ಗೋದಲ್ಲಿ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು