ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಮಧ್ಯಪ್ರದೇಶಕ್ಕೂ ವ್ಯಾಪಿಸಿದ ಹಿಜಾಬ್‌ ವಿವಾದ: ಇಲ್ಲಿದೆ ಮಾಹಿತಿ

Last Updated 8 ಫೆಬ್ರುವರಿ 2022, 14:01 IST
ಅಕ್ಷರ ಗಾತ್ರ

ಭೋಪಾಲ: ಹಿಜಾಬ್‌ ವಿವಾದವು ಈಗ ಕರ್ನಾಟಕವನ್ನು ದಾಟಿ ಮಧ್ಯಪ್ರದೇಶಕ್ಕೂ ವ್ಯಾಪಿಸಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ಪ್ರತಿಬಂಧಿಸಿದ್ದಕ್ಕೆ ಸಂಬಂಧಿಸಿದ ವಿವಾದವು ಮೊದಲಿಗೆ ಉಡುಪಿಯಲ್ಲಿ ಆರಂಭವಾಯಿತು. ನಂತರ ರಾಜ್ಯದ ಬೇರೆ ಬೇರೆ ಕಡೆಗಳಿಗೆ ವ್ಯಾಪಿಸಿದೆ. ಈ ವಿಚಾರವು ಸದ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಲ್ಲಿ ಬರುವ ಆದೇಶದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.

ಈ ಮಧ್ಯೆ, ಮಧ್ಯಪ್ರದೇಶದಲ್ಲೂ ವಿವಾದದ ಕಿಡಿ ಹೊತ್ತಿದೆ. ಸಚಿವರೊಬ್ಬರ ಹೇಳಿಕೆಯು ಅದಕ್ಕೆ ಇಂಬು ನೀಡಿದೆ.

‌‘ಮಧ್ಯಪ್ರದೇಶದ ಶಾಲೆಗಳಲ್ಲಿ ಹಿಜಾಬ್‌ಗೆ ಅನುಮತಿ ನೀಡುವುದಿಲ್ಲ. ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ಪಾಲಿಸಬೇಕು. ಹಿಜಾಬ್ ವಸ್ತ್ರ ಸಂಹಿತೆಯ ಭಾಗವಲ್ಲ’ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಮಂಗಳವಾರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪರ್ಮಾರ್, ಮಧ್ಯಪ್ರದೇಶದ ಶಾಲೆಗಳಲ್ಲಿ ವಸ್ತ್ರಸಂಹಿತೆಯನ್ನು ಮಾತ್ರ ಪಾಲಿಸಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದೇನೆ’ ಎಂದು ಹೇಳಿದರು.

ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲು ಮಧ್ಯಪ್ರದೇಶ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

‘ಶಾಲಾ ಸಮವಸ್ತ್ರವು ಯಾವುದೇ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಜನರು ಅದನ್ನು ಸಮುದಾಯದೊಂದಿಗೆ ಸಂಪರ್ಕಿಸುತ್ತಿರುವುದು ದುರದೃಷ್ಟಕರ’ ಎಂದು ಸಚಿವರು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ಕುರಿತು ಮಾತನಾಡಿರುವ ಭೋಪಾಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್, ‘ಶಿಕ್ಷಣ ಇಲಾಖೆ ಸಚಿವರ ಹೇಳಿಕೆಯು ದುರದೃಷ್ಟಕರ. ಹಿಜಾಬ್‌ನಂಥ ವಸ್ತ್ರಗಳನ್ನು ಧರಿಸಿದರೆ ಹೆಣ್ಣುಮಕ್ಕಳು ಚೆನ್ನಾಗಿ ಕಾಣುತ್ತಾರೆ. ಹಿಜಾಬ್ ಯಾವುದೇ ಹಾನಿ ಮಾಡಿಲ್ಲ. ಯಾವಾಗಲೂ ಹೆಣ್ಣುಮಕ್ಕಳನ್ನು ರಕ್ಷಿಸಿದೆ‘ ಎಂದು ಮಸೂದ್ ಹೇಳಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಘರ್ಷಣೆ ರೂಪ ಪಡೆದುಕೊಂಡಿರುವ ನಡುವೆಯೇ ಮಧ್ಯಪ್ರದೇಶದಲ್ಲಿ ಈ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT