ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011ರ ಜನಗಣತಿ ವಿವರ ಕೋರಿ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ

ಒಬಿಸಿ ಮೀಸಲಾತಿ; ಬಿಜೆಪಿ ಸದಸ್ಯರ ಗದ್ದಲದ ನಡುವೆ ಅಂಗೀಕಾರ
Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಮಹಾರಾಷ್ಟ್ರ ವಿಧಾನಸಭೆಯು, 2011ರ ಜನಗಣತಿಯ ಮಾಹಿತಿಯನ್ನು ಕೇಂದ್ರ ಸರ್ಕಾರ ಒದಗಿಸುವಂತೆ ಕೋರುವ ನಿರ್ಣಯವನ್ನು ಸೋಮವಾರ ಅಂಗೀಕರಿಸಿತು.‌

ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಯ ಸಮಗ್ರ ಮಾಹಿತಿಯನ್ನು ಸಿದ್ಧಪಡಿಸಲು ಜನಗಣತಿಯ ವಿವರಗಳು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಗತ್ಯವಿದೆ. ಇದರಿಂದ, ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಎನ್‌ಸಿಪಿ ನಾಯಕ ಹಾಗೂ ಆಹಾರ ಸಚಿವ ಛಗನ್‌ ಭುಜಬಲ್‌ ಅವರು ನಿರ್ಣಯ ಮಂಡಿಸಿದರು. ವಿರೋಧ ಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್‌ ಪೀಠದ ಮುಂದೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು.

‘ಈ ನಿರ್ಣಯವು ರಾಜಕೀಯ ಪ್ರೇರಿತವಾಗಿದೆ. ಇದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ. ಇತರ ಹಿಂದುಳಿದ ವರ್ಗಗಳು ರಾಜಕೀಯವಾಗಿ ಹಿಂದುಳಿದಿರುವ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ವಿವರ ಸಿದ್ಧಪಡಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಆದರೆ, ನ್ಯಾಯಾಲಯದ ನಿರ್ದೇಶನವನ್ನು ಸರ್ಕಾರ ಪಾಲಿಸಿಲ್ಲ’ ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ದೂರಿದರು.

’2011ರ ಜನಗಣತಿ ಎಂಟು ಕೋಟಿ ತಪ್ಪುಗಳಿವೆ. ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಮಾಹಿತಿಯಲ್ಲಿ 69 ಲಕ್ಷ ತಪ್ಪುಗಳಿವೆ. ಹೀಗಾಗಿ, ಈ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭುಜಬಲ್‌ ಅವರು, ‘ತಪ್ಪುಗಳಿದ್ದರೆ ಇದುವರೆಗೆ ಸರಿಪಡಿಸುವ ಪ್ರಯತ್ನ ಏಕೆ ಮಾಡಿಲ್ಲ. ಕೇಂದ್ರ ಸರ್ಕಾರದ ಉಜ್ವಲ್‌ ಅನಿಲ ಯೋಜನೆದಂತಹ ಯೋಜನೆಗಳಿಗೆ ಇದೇ ಮಾಹಿತಿಯನ್ನು ಬಳಸುತ್ತಿರುವಾಗ ಒಬಿಸಿ ಮೀಸಲಾತಿ ವಿಷಯಕ್ಕೆ ನೀಡಲು ಏನು ತೊಂದರೆ’ ಎಂದು ಹೇಳಿದರು.

‘ಕೋವಿಡ್‌–19 ಕಾರಣಕ್ಕೆ 2021ರ ಜನಗಣತಿ ನಡೆದಿಲ್ಲ. ಹೀಗಾಗಿ, ಒಬಿಸಿ ಜನಸಂಖ್ಯೆಯ ಸಮಗ್ರ ಮಾಹಿತಿಯನ್ನು ರಾಜ್ಯ ಸರ್ಕಾರ ಹೇಗೆ ಪಡೆಯುವುದು’ ಎಂದು ಪ್ರಶ್ನಿಸಿದರು.

‘ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿದ್ದಾ 2019ರ ಆಗಸ್ಟ 1ರಂದು ನೀತಿ ಆಯೋಗಕ್ಕೆ ಪತ್ರ ಬರೆದು ಜನಗಣತಿಯ ವಿವರ ಕೇಳಿದ್ದರು’ ಎಂದು ಹೇಳಿದರು.

ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದಾಗ ಬಿಜೆಪಿ ಶಾಸಕರಾದ ಗಿರೀಶ್‌ ಮಹಾಜನ್‌ ಮತ್ತು ಸಂಜಯ್‌ ಕುಟೆ ಅವರು ಸ್ಪೀಕರ್‌ ಪೀಠಕ್ಕೇರಿ ವಾಗ್ವಾದದಲ್ಲಿ ತೊಡಗಿದರು. ಆಗ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಮತ್ತೆ ಸದನವು ಸೇರಿದಾಗ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಮತ್ತು ಎನ್‌ಸಿಪಿ ಸದಸ್ಯರು ಒತ್ತಾಯಿಸಿದರು. ಸದಸ್ಯರ ನಡುವೆ ವಾಗ್ವಾದ ಉಂಟಾದಾಗ ಸದನವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸದನವು ಸೇರಿದಾಗ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT