ಶನಿವಾರ, ಜುಲೈ 2, 2022
25 °C

8 ವರ್ಷದ ಬಾಲಕಿ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಗ್ರಾಮದಲ್ಲಿ ಅಡ್ಡಾಡಿದ ಆರೋಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಸಂಬಲ್‌ಪುರ (ಒಡಿಶಾ): ಒಡಿಶಾದ ಜಾಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ಎಂಟು ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮದೆಲ್ಲೆಡೆ ಅಲೆದಾಡುತ್ತಿದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮನಕಿರಾ ಬ್ಲಾಕ್‌ನ ಗ್ರಾಮದಲ್ಲಿ ನಡೆದಿರುವ ಈ ಭೀಕರ ಘಟನೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬೆಳಗಿನ ಜಾವ ಬಾಲಕಿ ಜಮೀನಿಗೆ ತೆರಳಿದ್ದಾಗ ಕೊಡಲಿಯೊಂದಿಗೆ ಅಲ್ಲಿಗೆ ತೆರಳಿದ ಆರೋಪಿ ತಲೆ ಕಡಿದು ಹತ್ಯೆ ಮಾಡಿದ್ದಾನೆ. ಮುಂಡದಿಂದ ಬೇರ್ಪಟ್ಟ ರುಂಡವನ್ನು ಹಿಡಿದುಕೊಂಡು ಊರೂರು ಅಲೆದು, ಕೊಳವೆ ಬಾವಿಯ ಬಳಿ ತೊಳೆದಿದ್ದಾನೆ. ಇದನ್ನು ಕಂಡ ಆರೋಪಿಯ ಪತ್ನಿ, ಆತನೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಆದರೆ ಆತ ಕೊಡಲಿಯನ್ನು ತೋರಿಸಿ ಬೆದರಿಕೆ ಒಡ್ಡಿದ್ದಾನೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. 'ಪ್ರಾಥಮಿಕ ತನಿಖೆಯಲ್ಲಿ ಆತ ಮದ್ಯವ್ಯಸನಿಯಾಗಿದ್ದ, ಆದರೆ ಮೃತ ಬಾಲಕಿಯ ಕುಟುಂಬದೊಂದಿಗೆ ಯಾವುದೇ ದ್ವೇಷವನ್ನು ಹೊಂದಿರಲಿಲ್ಲ. ಆರೋಪಿ ಏಕೆ ಈ ಕೃತ್ಯ ಎಸಗಿದ ಎಂಬುದನ್ನು ನಾವು ಇನ್ನಷ್ಟೇ ಪತ್ತೆಮಾಡಬೇಕಿದೆ' ಎಂದು ಕುಚಿಂಡ ಉಪವಿಭಾಗದ ಪೊಲೀಸ್ ಅಧಿಕಾರಿ ರಾಜಕಿಶೋರ್ ಮಿಶ್ರಾ ತಿಳಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಆರೋಪಿಗೆ ಮನೆಯವರೊಂದಿಗೆ ಜಗಳವಾಡುವುದು ನಿತ್ಯದ ಕಾಯಕವಾಗಿತ್ತು. ಆದರೆ ಇದರಿಂದ ಆತ ಮಾನಸಿಕ ಸ್ಥಿಮಿತವನ್ನೇನು ಕಳೆದುಕೊಂಡಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆರೋಪಿಯಿಂದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮನಕಿರಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರೇಮಜೀತ್ ದಾಸ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು