ಗುರುವಾರ , ಮೇ 19, 2022
20 °C

ಭುವನೇಶ್ವರ: ಪವಿತ್ರ ಜಲ ತುಂಬಿದ ಕೊಡಕ್ಕೆ ಹರಾಜಿನಲ್ಲಿ ₹ 1.3 ಲಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಒಡಿಶಾ): ಕೆಲವರು ಇದನ್ನು ಮೂಡನಂಬಿಕೆ ಎನ್ನಬಹುದು. ಇದೊಂದು ವ್ಯಾಪಾರ ಎನ್ನಲೂಬಹುದು. ಆದರೆ, ಲಿಂಗರಾಜ ದೇವರ ವಾರ್ಷಿಕ ರುಕುಣ ರಥೋತ್ಸವದ ಮುನ್ನಾದಿನ ಇಲ್ಲಿನ ಪ್ರಸಿದ್ಧ ಮುಕ್ತೇಶ್ವರ ದೇವಾಲಯದ ಆವರಣದಲ್ಲಿರುವ ಮರೀಚಿ 'ಕುಂಡ' (ಕೊಳ)ದಿಂದ ತೆಗೆದ ಪವಿತ್ರ ಜಲ ತುಂಬಿದ ಕೊಡ ಬರೋಬ್ಬರಿ ₹ 1.30 ಲಕ್ಷಕ್ಕೆ ಹರಾಜಾಗಿದೆ. 

ಪವಿತ್ರ ಜಲ ತೆಗೆದ ಮೊದಲ ಮೂರು ಕೊಡಗಳನ್ನು 'ಮರೀಚಿ ಕುಂಡ'ದ ಬಳಿ ಶುಕ್ರವಾರ ರಾತ್ರಿ ಹರಾಜು ಮಾಡಲಾಗಿದೆ. ಮಕ್ಕಳಿಲ್ಲದವರು ಈ ನೀರಿನ ಸ್ಥಾನ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಲಿಂಗರಾಜ ದೇವಾಲಯದ ಸೇವಕರ ಸಂಘ 'ಬೊದು ನಿಜೋಗ್' ಈ ಹರಾಜು ಪ್ರಕ್ರಿಯೆ ನಡೆಸಿದೆ. ಭುವನೇಶ್ವರದ ಬಾರಮುಂದ ಪ್ರದೇಶದ ದಂಪತಿ, ಮೊದಲ ಕೊಡಕ್ಕೆ ಇಷ್ಟು ಹಣ (₹ 1.30 ಲಕ್ಷ) ನೀಡಿದ್ದಾರೆ. ಇದರ ಮೂಲ ಬೆಲೆ ₹ 25,000 ಆಗಿತ್ತು.

₹ 16,000 ಮೂಲ ಬೆಲೆ ನಿಗದಿಯಾಗಿದ್ದ ಎರಡನೇ ಕೊಡ ₹ 47,000ಕ್ಕೆ ಬಿಕರಿಯಾಗಿದ್ದರೆ, ಮೂರನೇಯದು ₹ 13 ಸಾವಿರಕ್ಕೆ ಹರಾಜಾಗಿದೆ.

ಮೊದಲ ಮೂರು ಕೊಡಗಳು ಹರಾಜಾದ ಬಳಿಕ, 'ಬೊದು ನಿಜೋಗ್' ಉಳಿದ ಕೊಡಗಳನ್ನು ಯಾವುದೇ ಬೇಡಿಕೆಗಳಿಲ್ಲದೇ ಬಡ ದಂಪತಿಗಳಿಗೆ ಹಂಚಿಕೆ ಮಾಡಿದೆ. ನೀರಿನ ಹರಾಜು ಪ್ರಕ್ರಿಯೆಯು ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಆಯೋಜಿಸಲು ಸಾಧ್ಯವಾಗಿರಲಿಲ್ಲ ಎಂದು ದೇವಾಲಯದ ಸೇವಕರೊಬ್ಬರು ಹೇಳಿದ್ದಾರೆ.

ಪವಿತ್ರ ಜಲ ತುಂಬಿದ ಮೊದಲ ಕೊಡ ಖರೀದಿಸಿದ ದಂಪತಿ, ತಾವು ₹ 2.5 ಲಕ್ಷದ ವರೆಗೆ ವೆಚ್ಚ ಮಾಡಲು ಸಿದ್ಧವಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ.

'ನೀರಿನ ಬಗ್ಗೆ ಜನರು ಹೊಂದಿರುವ ನಂಬಿಕೆಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಒಂದು ಕೊಡ ನೀರಿನ ಸ್ನಾನ ಮಾಡುವುದರಿಂದ ಮನುಷ್ಯರಲ್ಲಿ ಫಲವತ್ತತೆ ಹೆಚ್ಚುತ್ತದೆ ಎಂಬುದನ್ನು ನಾನು ನಂಬುವುದಿಲ್ಲ. ಅದೇರೀತಿ, ಮರೀಚಿ ಕುಂಡದ ಸುತ್ತಲು ಅನೇಕ ಅಶೋಕ ವೃಕ್ಷಗಳಿವೆ. ಅವುಗಳ ಬೇರುಗಳು, ಕೊಳದ ತಳದಲ್ಲಿವೆ. ಹೀಗಾಗಿ ನೀರಿನಲ್ಲಿ ಔಷದೀಯ ಅಂಶಗಳು ಇಲ್ಲ ಎಂದೂ ಹೇಳಲಾಗದು' ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಸಂತೋಷ್‌ ಮಿಶ್ರಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು