ಮಂಗಳವಾರ, ಜೂನ್ 28, 2022
28 °C

ಆನ್‌ಲೈನ್ ಕ್ಲಾಸ್‌: ವಿದ್ಯಾರ್ಥಿಗಳಿಗೆ ಡಿಜಿಟಲ್ ಉಪಕರಣ– ಕೇರಳ ಸಿ.ಎಂ ಆಶ್ವಾಸನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ: ಕೋವಿಡ್‌–19 ಸಾಂಕ್ರಾಮಿಕದ ಕಾಲದಲ್ಲಿ ಮಕ್ಕಳು ಯಾವುದೇ ತೊಂದರೆಯಿಲ್ಲದೇ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಇಂಟರ್ನೆಟ್‌ ಸಂಪರ್ಕ ಮತ್ತು ಡಿಜಿಟಲ್‌ ಸಾಧನಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದರು.

ಆರ್ಥಿಕ ಸ್ಥಿತಿಗತಿ ಸೇರಿದಂತೆ ಯಾವುದೇ ನಿರ್ಬಂಧಗಳಿಲ್ಲದೇ, ಎಲ್ಲ ವಿದ್ಯಾರ್ಥಿಗಳೂ ಆನ್‌ಲೈನ್ ತರಗತಿಗಳ ಮೂಲಕ ಪಾಠ ಕಲಿಯಲು ಅನುಕೂಲವಾಗುವಂತೆ ಉಚಿತ ಅಂತರ್ಜಾಲ ಅಥವಾ ಅಗತ್ಯವಿರುವ ಮಕ್ಕಳಿಗೆ ಸಬ್ಸಿಡಿ ದರದಲ್ಲಿ ಅಂತರ್ಜಾಲ ಸೌಲಭ್ಯ ನೀಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿಧಾನಸಭೆಗೆ ತಿಳಿಸಿದರು. ಇದೇ ವೇಳೆ ‘ಡಿಜಿಟಲ್ ಸೌಲಭ್ಯ‘ದ ಹೆಸರಲ್ಲಿ ವಿದ್ಯಾರ್ಥಿಗಳು ವಿಭಜನೆಯಾಗುವುದನ್ನು ತಪ್ಪಿಸಲು ಸರ್ಕಾರ ಕೈಗೊಳ್ಳುವ ಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.

ರಾಜ್ಯದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕ ಎನ್ನುವುದು ಒಂದು ಸಮಸ್ಯೆಯಾಗಿದೆ. ದೂರದ ಸಂಪರ್ಕದ ಸ್ಥಳಗಳು ಇನ್ನೂ ನೆಟ್‌ವರ್ಕ್ ಸಂಪರ್ಕದ ವ್ಯಾಪ್ತಿಯಿಂದ ಹೊರಗಿವೆ. ಇಂಥ ಪ್ರದೇಶಗಳೂ ಸೇರಿದಂತೆ ಬುಡಕಟ್ಟು ಪ್ರದೇಶಗಳಿಗೂ ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಇಂಟರ್ನೆಟ್‌ ಸೌಲಭ್ಯ ಹಾಗೂ ಡಿಜಿಟಲ್‌ ಸಾಧನಗಳ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಅಂತರ್ಜಾಲ ಸೇವಾ ಪೂರೈಕೆದಾರರ ಸಭೆ ಕರೆದಿದೆ. ಸರ್ಕಾರದ ಈ ಯೋಜನೆ ಯಶಸ್ವಿಗೊಳ್ಳಲು ವಿವಿಧ ಕ್ಷೇತ್ರಗಳ ಬೆಂಬಲದೊಂದಿಗೆ ಸಂಘಟಿತ ಪ್ರಯತ್ನ ಕೈಗೊಳ್ಳಬೇಕಿದೆ ಎಂದು ಹೇಳಿದ ವಿಜಯನ್, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕಲಿಕೆಗೆ ಯಾವುದೇ ರೀತಿಯ ಹೊರೆಯಾಗುದಂತೆ, ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ‘ ಎಂದು ತಿಳಿಸಿದರು.

ಸಾಂಕ್ರಾಮಿಕದ ಅವಧಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಆನ್‌ಲೈನ್ ಶಿಕ್ಷಣ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ, ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಧನಗಳ ಪೂರೈಕೆಯಲ್ಲಿ ವ್ಯತ್ಯಾಸ ಮಾಡಿರುವುದು‘ ಎಂದು ಮುಖ್ಯಮಂತ್ರಿ ಗಮನ ಸೆಳೆದರು.

ರಾಜ್ಯದಲ್ಲಿರುವ ಒಂದು ವರ್ಗದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಫೋನ್, ಲ್ಯಾಪ್‌ಟಾಪ್‌, ಕಂಪ್ಯೂಟರ್ ಅಥವಾ ಟಿವಿಯಂತಹ ಡಿಜಿಟಲ್ ಉಪಕರಣಗಳನ್ನು ಖರೀದಿಸಲು ಶಕ್ತಿ ಇಲ್ಲ ಎಂದು ಉಲ್ಲೇಖಿಸಿದರು. ಆದರೆ, ಸರ್ಕಾರ, ಇಂಥ ಅನೇಕ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸಿ, ವಿವಿಧ ಕ್ಷೇತ್ರಗಳಿಂದ ಸಂಪನ್ಮೂಲಗಳನ್ನು ಕ್ರೋಡಿಕರಿಸಿ, ವಿದ್ಯಾರ್ಥಿಗಳ ಆನ್‌ಲೈನ್ ಕಲಿಕೆಗೆ ಅಗತ್ಯವಾದ ಉಪಕರಣಗಳು ಮತ್ತು ಅಂತರ್ಜಾಲ ಸಂಪರ್ಕವನ್ನು ಪೂರೈಸಲಿದೆ‘ ಎಂದು ವಿಜಯನ್ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು