ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಣಿಸಲು ವಿರೋಧ ಪಕ್ಷಗಳು ಒಗ್ಗೂಡಲಿವೆ: ಮಮತಾ  

Last Updated 8 ಸೆಪ್ಟೆಂಬರ್ 2022, 12:33 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಮುಂಬರುವ (2024) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಲಿವೆ. ಈಗ ಆಟ ಶುರುವಾಗಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಇಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,2023ರಲ್ಲಿಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ಮುಗಿದ ನಂತರ ಬಿಜೆಪಿ ನಾಯಕತ್ವಕ್ಕೆ ರಾಜಕೀಯ ಎಂದರೆ ಏನು? ಎನ್ನುವುದು ಅರ್ಥವಾಗುತ್ತದೆ. ಈ ಆಟ ಪಶ್ಚಿಮ ಬಂಗಾಳದಿಂದ ಶುರುವಾಗಲಿದೆ ಎಂದು ಹೇಳಿದರು.

‘ನಾವು ಎಲ್ಲರೂ ಒಟ್ಟಾಗಿ ಇದ್ದೇವೆ. ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಹೇಮಂತ್ ಸೊರೇನ್ ಮತ್ತು ಉಳಿದ ಸ್ನೇಹಿತರು ಇದೇ ಮಾತು ಹೇಳಿದ್ದಾರೆ. ಎಲ್ಲ ಪಕ್ಷಗಳೂ ಒಂದಾಗಲಿವೆ. ಐದು ರಾಜ್ಯಗಳಲ್ಲೇ ಬಿಜೆಪಿ 100 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಆದರೆ, ಬಿಜೆಪಿಯವರು 300ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ಸರ್ಕಾರ ರಚಿಸುತ್ತೀವಿ ಎನ್ನುತ್ತಿದ್ದಾರೆ. ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ತನ್ನ ದುರಹಂಕಾರ ಮತ್ತು ಜನರ ಕೋಪಕ್ಕೆ ತುತ್ತಾಗಿರುವ ಬಿಜೆಪಿಯ ಲೆಕ್ಕಾಚಾರ ದಿಕ್ಕುತಪ್ಪಲಿದೆ.ಜಾರ್ಖಂಡ್‌ ಶಾಸಕರನ್ನು ಹಣದ ಸಮೇತ ಇತ್ತೀಚೆಗೆ ನಮ್ಮ ಪೊಲೀಸರು ಬಂಧಿಸಿ, ಶಾಸಕರ ಕುದುರೆ ವ್ಯಾಪಾರ ತಪ್ಪಿಸಿದರು. ಇದರಿಂದ ನಮ್ಮ ನೆರೆಯ ರಾಜ್ಯದಲ್ಲಿ ಹೇಮಂತ್ ಸೊರೇನ್ ಅವರ ಸರ್ಕಾರ ಪತನವನ್ನು ತಡೆಯಲು ಸಾಧ್ಯವಾಯಿತು ಎಂದು ಹೇಳಿದರು.

‘ಸಿಬಿಐ ಮತ್ತು ಇ.ಡಿ ಮುಂದಿಟ್ಟುಕೊಂಡು ನಮ್ಮನ್ನು ಬೆದರಿಸಬಹುದೆಂದು ಬಿಜೆಪಿ ಭಾವಿಸಿದೆ. ಅವರು ಇಂತಹ ತಂತ್ರಗಳನ್ನು ಹೆಚ್ಚೆಚ್ಚು ಅನುಸರಿಸಿದರೆ, ಮುಂದಿನ ವರ್ಷ ಪಂಚಾಯಿತಿ ಚುನಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚೆಚ್ಚು ಸೋಲು ಕಾಣಲಿದ್ದಾರೆ’ ಎಂದು ಅವರು ಹೇಳಿದರು.

ಹಸೀನಾ ಭೇಟಿ ವೇಳೆ ಆಹ್ವಾನಿಸದ ಕೇಂದ್ರ: ಮಮತಾ ಕಿಡಿ

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿ ವೇಳೆ ಕೇಂದ್ರ ಸರ್ಕಾರ ತಮಗೆ ಆಹ್ವಾನ ನೀಡಿಲ್ಲವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶೇಖ್ ಹಸೀನಾ ಅವರೊಂದಿಗೆ ನಾನು ಉತ್ತಮ ಸಂಬಂಧ ಹೊಂದಿರುವೆ. ಆದರೆ, ನನ್ನನ್ನು ಅವರ ಭೇಟಿಯ ಭಾಗವಾಗಲು ಕೇಂದ್ರ ಸರ್ಕಾರ ಆಹ್ವಾನಿಸಲಿಲ್ಲ.ಹಸೀನಾ ಅವರನ್ನು ನಾನು ಭೇಟಿಯಾದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಳಮಳ ಏಕೆ ಎನ್ನುವುದನ್ನು ತಿಳಿಯುವ ಕುತೂಹಲ ನನ್ನದು’ ಎಂದು ತೃಣಮೂಲ ಕಾಂಗ್ರೆಸ್‌ನ ವಿಶೇಷ ಅಧಿವೇಶನ ಉದ್ದೇಶಿಸಿ ಮಮತಾ ಬ್ಯಾನರ್ಜಿ ಹೇಳಿದರು.

ಮಮತಾ ಟೀಕೆ ಅಲ್ಲಗಳೆದ ಅಧಿಕಾರಿಗಳು

ಮತ್ತೊಂದು ದೇಶದ ಮುಖ್ಯಸ್ಥರ ಭೇಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಆಹ್ವಾನಿಸುವುದಿಲ್ಲ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಶೇಖ್ ಹಸೀನಾ ಅವರ ಪ್ರವಾಸದ ಭಾಗವಾಗಲು ಆಹ್ವಾನ ನೀಡದಿರುವುದಕ್ಕೆ ಮಮತಾ ಬ್ಯಾನರ್ಜಿ ಅವರು ಮಾಡಿರುವ ಟೀಕೆಗಳನ್ನು ಕೇಂದ್ರದ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

‘2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಆಹ್ವಾನಿಸಿದ್ದರು. ಏಕೆಂದರೆ, ಅಲ್ಲಿ ಎರಡೂ ದೇಶಗಳ ನಡುವೆ ಬಸ್ ಸೇವೆಗೆ ಚಾಲನೆ ನೀಡಬೇಕಿತ್ತು’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT