ಭಾನುವಾರ, ಮೇ 9, 2021
25 °C
ಹಿರಿಯ ನಾಗರಿಕರಿಗೂ ಸೋಂಕಿನ ಅಪಾಯ ತಪ್ಪಿದ್ದಲ್ಲ

ಶೇ 70ರಷ್ಟು ಕೋವಿಡ್ ರೋಗಿಗಳು 40 ವರ್ಷಕ್ಕಿಂತ ಮೇಲ್ಪಟ್ಟವರು -ಐಸಿಎಂಆರ್ ಎಚ್ಚರಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಶೇ 70ರಷ್ಟು ಮಂದಿ 40 ವರ್ಷಕ್ಕಿಂತ ಮೇಲ್ಪಟ್ಟವರು. ಅಂತೆಯೇ ಹಿರಿಯ ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೊಳಗಾಗುತ್ತಿದ್ದಾರೆ’ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್‌) ಹೇಳಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ್ ಅವರು, ‘ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮೊದಲ ಮತ್ತು ಎರಡನೇ ಅಲೆಗಳ ನಡುವಿನ ಸಾವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಎರಡನೇ ಅಲೆಯಲ್ಲಿ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿದೆ ಮತ್ತು  ವೆಂಟಿಲೇಟರ್ ಅವಶ್ಯಕತೆ ಹೆಚ್ಚಿಲ್ಲ. ಮೊದಲ ಅಲೆಯಲ್ಲಿ ಶೇ 41.5ರಷ್ಟು ಆಮ್ಲಜನಕದ ಅವಶ್ಯಕತೆ ಇದ್ದರೆ ಎರಡನೇ ಅಲೆಯಲ್ಲಿ ಶೇ 54.5ರಷ್ಟು ಮಂದಿಗೆ ಆಮ್ಲಜನಕದ ಅವಶ್ಯಕತೆ ಉಂಟಾಗಿದೆ’ ಎಂದು ಮಾಹಿತಿ ನೀಡಿದರು.

‘ಮೊದಲ ಅಲೆಯಲ್ಲಿ ರೋಗಿಗಳಲ್ಲಿ ಗಂಟಲು, ಒಣಕೆಮ್ಮು ಮತ್ತು ಇತರ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಆದರೆ, ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ ಸ್ವಲ್ಪ ಹೆಚ್ಚಾಗಿಯೇ ಕಾಣಿಸಿಕೊಂಡಿದೆ. ಎರಡೂ ಅಲೆಗಳಲ್ಲಿ ಶೇ 70ಕ್ಕಿಂತ ಹೆಚ್ಚು ರೋಗಿಗಳು 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಎರಡನೇ ಅಲೆಯಲ್ಲಿ ಲಕ್ಷಣರಹಿತ ರೋಗಿಗಳ ಪ್ರಮಾಣ ಹೆಚ್ಚಿದೆ’ ಎಂದರು.

‘ಮೊದಲ ಅಲೆಯ 7,600 ರೋಗಿಗಳು ಮತ್ತು ಎರಡನೇ ಅಲೆಯಲ್ಲಿ 1,885 ರೋಗಿಗಳನ್ನು ಅಧ್ಯಯನ ನಡೆಸಿದಾಗ ಈ ಅಂಶಗಳು ಕಂಡುಬಂದಿವೆ’ ಎಂದು ಬಲರಾಂ ಭಾರ್ಗವ್ ತಿಳಿಸಿದ್ದಾರೆ. 

ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪೌಲ್  ಮಾತನಾಡಿ, ‘ಮೊದಲ ಅಲೆಯಲ್ಲಿ ಶೇ 31 ರೋಗಿಗಳು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು, ಈ ಬಾರಿ ಅದು ಶೇ 32ರಷ್ಟಿದೆ. ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಳಸಬೇಕು. ಮನೆಯಲ್ಲಿರುವ ರೋಗಿಗಳಿಗೆ ಇದನ್ನು ಬಳಸಬಾರದು’ ಎಂದು ಸಲಹೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು