ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ತಲುಪಿದ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’

Last Updated 24 ಏಪ್ರಿಲ್ 2021, 11:09 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಆಮ್ಲಜನಕ ತುಂಬಿದ್ದ ಟ್ಯಾಂಕರ್‌ಗಳನ್ನು ಹೊತ್ತುತಂದ ಮೊದಲ ‘ಆಕ್ಸಿಜನ್‌ ಎಕ್ಸ್‌ಪ್ರೆಸ್’ ವಿಶೇಷ ರೈಲು ಶನಿವಾರ ಮಹಾರಾಷ್ಟ್ರದ ನಾಸಿಕ್‌ಗೆ ಆಗಮಿಸಿತು. ವಿಶಾಖಪಟ್ಟಣದಿಂದ ನಾಸಿಕ್‌ಗೆ ಈ ರೈಲು ಒಂದು ದಿನದಲ್ಲಿ ತಲುಪಿದೆ.

ಕೋವಿಡ್‌ನ ಗಂಭೀರ ಪರಿಣಾಮಗಳಿಗೆ ಗುರಿಯಾಗಿರುವ ಮಹಾರಾಷ್ಟ್ರಕ್ಕೆ ಆಮ್ಲಜನಕ ಸಾಗಣೆಗೆ ಒತ್ತು ನೀಡಿದ್ದಕ್ಕಾಗಿ, ನೆರೆ ರಾಜ್ಯವಾದ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೃತಜ್ಞತೆ ಸಲ್ಲಿಸಿದ್ದಾರೆ. ‘ಈ ಮೂಲಕ ನಿರ್ಣಾಯಕ ಘಟ್ಟದಲ್ಲಿ ನೆರೆ ರಾಜ್ಯಕ್ಕೆ ಒಡಿಶಾ ನೆರವಾಗಿದೆ’ ಎಂದಿದ್ದಾರೆ.

ರೈಲ್ವೆ ಸಚಿವ ಪೀಯೂಷ್‌ ಗೋಯಲ್ ಅವರು, ‘ರೈಲು ನಾಸಿಕ್‌ ತಲುಪಿದೆ. ವಿವಿಧ ಆಮ್ಲಜನಕ ಟ್ಯಾಂಕರ್‌ಗಳನ್ನು ಸಾಗಿಸಲಾಗಿದೆ. ರೈಲ್ವೆ ಇಲಾಖೆಯು ಸವಾಲಿನ ರೂಪದಲ್ಲಿ ಈ ಹೊಣೆಯನ್ನು ನಿಭಾಯಿಸಿದ್ದು, ರೈಲು ಒಡಿಶಾದ ಕಲಂಬೊಲಿಯಿಂದ ವೈಜಾಗ್‌ ಹಾಗೂ ಅಲ್ಲಿಂದ ನಾಸಿಕ್‌ಗೆ ತಲುಪಿದೆ’ ಎಂದರು.

ದ್ರವೀಕೃತ ಆಮ್ಲಜನಕದ ಟ್ಯಾಂಕರ್‌ಗಳ ಸಾಗಣೆಗೆ ಮನವಿ ಬಂದ ಕೂಡಲೇ ರೈಲ್ವೆ ಇಲಾಖೆಯು ಅದಕ್ಕಾಗಿ ಯೋಜನೆಯನ್ನು ರೂಪಿಸಿತು. ಕೇವಲ 24 ಗಂಟೆಯ ಅವಧಿಯಲ್ಲಿ ಈ ಯೋಜನೆ ಕಾರ್ಯಗತಗೊಂಡಿದೆ.

ಟ್ಯಾಂಕರ್‌ಗಳು ಸುಗಮವಾಗಿ ತಲುಪುವಂತೆ ರೈಲ್ವೆ ಇಲಾಖೆಯು ಕಾಡು, ಮೇಲ್ಸೇತುವೆ, ಸುರಂಗ, ತಿರುವುಗಳು ಒಳಗೊಂಡಂತೆ ಸಂಪೂರ್ಣ ಮಾರ್ಗ ಕುರಿತು ನೀಲನಕ್ಷೆ ರೂಪಿಸಿತು. ಟ್ಯಾಂಕರ್‌ ಟಿ1618ನ ಎತ್ತರ ಸುಮಾರು 3320 ಎಂಎಂ ಇದ್ದು, ಇದನ್ನು ಸರಾಗವಾಗಿ ಸಮತಟ್ಟಾದ ವ್ಯಾಗನ್‌ ಮೇಲೆ ಇಡಬಹುದಿತ್ತು. ಅರಣ್ಯ ಪ್ರದೇಶದಲ್ಲಿ ಇದರ ಸಾಗಣೆಗೆ ಅವಕಾಶ ಇಲ್ಲದಿದ್ದರಿಂದ ವಾಸೈ ಮೂಲಕ ದೂರದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಕೇಂದ್ರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಕಲಂಬೊಲಿ ಮತ್ತು ವೈಜಾಗ್ ನಡುವಣ ಅಂತರ ಸುಮಾರು 1850 ಕಿ.ಮೀ ಆಗಿದ್ದು, 50 ಗಂಟೆಯಲ್ಲಿ ಟ್ಯಾಂಕರ್‌ಗಳು ಕ್ರಮಿಸಿದ್ದವು. 100ಟನ್‌ಗೂ ಅಧಿಕ ತೂಕದ 7 ಟ್ಯಾಂಕರ್‌ಗಳನ್ನು10 ಗಂಟೆಗಳಲ್ಲಿ ವ್ಯಾಗನ್‌ಗೆ ಲೋಡ್‌ ಮಾಡಿದ್ದು, ಒಟ್ಟು 21 ಗಂಟೆಯಲ್ಲಿ ನಾಗಪುರಕ್ಕೆ ತಲುಪಿಸಲಾಗಿದೆ. ನಾಗಪುರದಲ್ಲಿ 3 ಟ್ಯಾಂಕರ್ ಇಳಿಸಿದ ಬಳಿ, ಉಳಿದ ನಾಲ್ಕು ಟ್ಯಾಂಕರ್‌ಗಳನ್ನು ಶನಿವಾರ ಬೆಳಿಗ್ಗೆ 10.25ಕ್ಕೆ ನಾಸಿಕ್‌ಗೆ ತಲುಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT