ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧ ಆರೋಪ: ಎಂವಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ

ಶಿವಸೇನಾ ನಾಯಕ ಸಂಜಯ ರಾವುತ್‌
Last Updated 21 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ಮುಂಬೈ:‌ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಮುಂಬೈ ಮಾಜಿ ಪೊಲೀಸ್‌ ಕಮಿಷನರ್‌ ಮಾಡಿರುವ ಆರೋಪ ಮತ್ತು ಸಚಿನ್‌ ವಾಜೆ ಪ್ರಕರಣದಿಂದ ಮಹಾ ವಿಕಾಸ ಅಘಾಡಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಶಿವಸೇನಾ ನಾಯಕ ಸಂಜಯ ರಾವುತ್‌ ಹೇಳಿದ್ದಾರೆ.

ಈಗ ಅಂಟಿರುವ ಕಳಂಕವನ್ನು ತೊಡೆದು ಹಾಕಲು ಆಡಳಿತಾರೂಢ ಮೈತ್ರಿ ಪಕ್ಷಗಳು ಒಗ್ಗಟ್ಟಾಗಿ ಚರ್ಚಿಸಬೇಕಾಗಿದೆ ಎಂದು ಭಾನುವಾರ ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳು ನಗರದ ಬಾರ್‌ ಮತ್ತು ರೆಸ್ಟೊರೆಂಟ್‌ಗಳಿಂದ ಪ್ರತಿ ತಿಂಗಳು ₹100 ಕೋಟಿ ಸಂಗ್ರಹಿಸಿ ಕೊಡಬೇಕು ಎಂದು ಗೃಹ ಸಚಿವ ಅನಿಲ್‌ ದೇಶಮುಖ್‌ ಸೂಚಿಸಿದ್ದಾರೆ ಎಂದು ಆರೋಪಿಸಿ ಪರಮ್‌ ಬೀರ್‌ ಸಿಂಗ್‌ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು.

‘ಸರ್ಕಾರ ಅಥವಾ ಸಚಿವರ ವಿರುದ್ಧ ಮಾಡಿರುವ ಇಂತಹ ಆರೋಪಗಳು ಆಘಾತಕಾರಿಯಾಗಿವೆ. ಸಿಂಗ್‌ ಅವರ ಪತ್ರದಲ್ಲಿನ ಅಂಶಗಳು ಬಹಳ ಸೂಕ್ಷ್ಮವಾಗಿವೆ. ಪತ್ರದಲ್ಲಿನ ಅಂಶಗಳ ನಿಖರತೆಯ ಪರಿಶೀಲನೆಯ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಕೈಗೊಳ್ಳಲಿದ್ದಾರೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಮೈತ್ರಿ ಪಕ್ಷಗಳು ಸಹ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ರಾವುತ್‌ ಹೇಳಿದ್ದಾರೆ.

ಪರಮ್‌ ಬೀರ್‌ ಸಿಂಗ್‌ ಅವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ದೇಶಮುಖ್‌ ಅವರೇ ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಪವಾರ್‌ ಅವರು ಸರ್ಕಾರ ಉಳಿಸಲು ಪ್ರಯತ್ನಿಸುತ್ತಿದ್ದಾರೆ; ಫಡಣವೀಸ್‌: (ನಾಗಪುರ ವರದಿ): ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ (ಎಂವಿಎ) ಸರ್ಕಾರವನ್ನು ಉಳಿಸಲು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ದೂರಿದ್ದಾರೆ.

‘ವಿವಾದಿತ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಕಳೆದ ವರ್ಷ ಮರು ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿಯಾಗಲಿ ಅಥವಾ ಗೃಹ ಸಚಿವರಾಗಲಿ ಜವಾಬ್ದಾರರಲ್ಲ’ ಎಂದು ಪವಾರ್‌ ಅವರು ಹೇಳಿರುವುದು ಸರಿಯಲ್ಲ ಎಂದು ಅವರು
ಟೀಕಿಸಿದ್ದಾರೆ.

‘ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಅರಿವಿಲ್ಲದೆ ವಾಜೆ ಅವರನ್ನು ಪ್ರಮುಖ ಹುದ್ದೆಗೆ ನೇಮಿಸುವುದು ಮತ್ತು ಪ್ರಮುಖ ಪ್ರಕರಣಗಳ ವಿಚಾರಣೆಗೆ ನಿಯೋಜಿಸುವುದು ಹೇಗೆ ಸಾಧ್ಯ?’ ಎಂದು ಫಡಣವೀಸ್‌ ಪ್ರಶ್ನಿಸಿದ್ದಾರೆ.

ಉದ್ಯಮಿ ಹಿರೇನ್‌ ಸಾವು ಪ್ರಕರಣ; ಇಬ್ಬರ ಬಂಧನ: ಉದ್ಯಮಿ ಮನ್‌ಸುಖ್‌ ಹಿರೇನ್ ಅನುಮಾನಸ್ಪದವಾಗಿ ಸಾವಿಗೀ
ಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಇಬ್ಬರನ್ನು ಬಂಧಿಸಿದೆ.

ಶನಿವಾರ ತಡ ರಾತ್ರಿ ಪೊಲೀಸ್‌ ಕಾನ್‌ಸ್ಟೆಬಲ್‌ ವಿನಾಯಕ ಶಿಂಧೆ ಮತ್ತು ಬೂಕ್ಕಿ ನರೇಶ್‌ ಧರೆ ಎನ್ನುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಇಬ್ಬರನ್ನು ವಿಚಾರಣೆಗಾಗಿ ಎಟಿಎಸ್‌ ಪ್ರಧಾನ ಕಚೇರಿಗೆ ಕರೆಯಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಬಂಧಿಸಲಾಗಿದೆ. ಲಖನ್‌ ಭಯ್ಯಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಶಿಂಧೆ ಅಪರಾಧಿ ಎಂದು ಸಾಬೀತಾಗಿದೆ. ಕಳೆದ ವರ್ಷ ಶಿಕ್ಷೆ ಅವಧಿಯ ರಜೆ ಪಡೆದು ಜೈಲಿನಿಂದ ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT