ಸೋಮವಾರ, ಜೂನ್ 14, 2021
22 °C

ಫೇಸ್‌ಬುಕ್‌ಗೆ ಸಂಸದೀಯ ಸಮಿತಿಯಿಂದ ಸಮನ್ಸ್‌: ಸೆ. 2ರಂದು ವಿಚಾರಣೆಗೆ ಬರಲು ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಬಿಜೆಪಿಯ ಕೆಲವು ರಾಜಕಾರಣಿಗಳ ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಫೇಸ್‌ಬುಕ್‌ ಇಂಡಿಯಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಅಮೆರಿಕ ಪತ್ರಿಕೆಯೊಂದರ ವರದಿಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು, ಸೆ. 2ರಂದು ವಿಚಾರಣೆಗೆ ಬರುವಂತೆ ಫೇಸ್‌ಬುಕ್‌ಗೆ ಸಮನ್ಸ್‌ ಜಾರಿ ಮಾಡಿದೆ.

ತನ್ನ ಸಾಮಾಜಿಕ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತ ವರದಿಯ ಆಧಾರದಲ್ಲಿ ಚರ್ಚಿಸಲು ಸಂಸದೀಯ ಸ್ಥಾಯಿ ಸಮಿತಿಯು ಸಮನ್ಸ್‌ ನೀಡಿದೆ.

ಫೇಸ್‌ಬುಕ್‌ನ ಪ್ರತಿನಿಧಿಗಳಲ್ಲದೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಸೆಪ್ಟೆಂಬರ್ 2 ರಂದು ಹಾಜರಾಗುವಂತೆ ಸಮಿತಿ ಮನವಿ ಮಾಡಿದೆ. ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ವಿಶೇಷ ಒತ್ತು ನೀಡುವುದು, ಸಾಮಾಜಿಕ / ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗ, ಡಿಜಿಟಲ್‌ ಮಾಧ್ಯಮದಲ್ಲಿ ಮಹಿಳಾ ಸುರಕ್ಷತೆ ತಡೆಗಟ್ಟುವ ಕುರಿತು ಸೆ. 2ರಂದು ಚರ್ಚೆ ನಡೆಯಲಿದೆ.

ಸಮಿತಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಸಮಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಸಮಿತಿಯ ಹಿರಿಯ ಸದಸ್ಯ ಬಿಜೆಪಿ ಸಂಸದರಾದ ನಿಶಿಕಾಂತ್‌ ದುಬೆ ಮತ್ತು ಮಾಜಿ ಸಚಿವ ರಾಜವರ್ಧನ ರಾಥೋಡ್‌ ಅವರು ಲೋಕಸಭೆ ಸ್ಪೀಕರ್‌ ಅವರಿಗೆ ದೂರು ನೀಡಿದ್ದಾರೆ. ಈ ಮಧ್ಯೆಯೇ ವಿಚಾರಣೆಗೆ ಬರುವಂತೆ ಫೇಸ್‌ಬುಕ್‌ಗೆ ಸಮಿತಿ ಸಮನ್ಸ್‌ ಜಾರಿ ಮಾಡಿದೆ.

‘ದ್ವೇಷ ಭಾಷಣ ನಿಯಮಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿ ಮತ್ತು ಇತರ ಹಿಂದೂ ರಾಷ್ಟ್ರೀಯವಾದಿ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಅನ್ವಯಿಸುವುದನ್ನು ಫೇಸ್‌ಬುಕ್‌ ಭಾರತದ ಹಿರಿಯ ಅಧಿಕಾರಿಯೊಬ್ಬರು ವಿರೋಧಿಸಿದ್ದರು. ಬಿಜೆಪಿ ನಾಯಕರ ದ್ವೇಷ ಭಾಷಣಗಳನ್ನು ತಡೆಯೊಡ್ಡುವ ಕಾರ್ಯವನ್ನು ಫೇಸ್‌ಬುಕ್‌  ಮಾಡಿಲ್ಲ,’ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಭಾನುವಾರ ವರದಿ ಮಾಡಿತ್ತು.

ಲೋಕಸಭಾ ಸಚಿವಾಲಯ ಹೊರಡಿಸಿದ ಕಾರ್ಯಸೂಚಿ ಅಧಿಸೂಚನೆಗಳ ಪ್ರಕಾರ ಸೆಪ್ಟೆಂಬರ್ 1 ರ ಸಭೆಗೆ ಸಂವಹನ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳ ಪ್ರತಿನಿಧಿಗಳು, ಬಿಹಾರ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಸರ್ಕಾರಗಳ ಪ್ರತಿನಿಧಿಗಳನ್ನು ಕರೆಯಲಾಗಿದೆ.

'ಸುದ್ದಿ ಪ್ರಸಾರದಲ್ಲಿ ನೈತಿಕ ಮಾನದಂಡ’ಗಳ ಕುರಿತು ಚರ್ಚಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ‘ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್’, ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ಮತ್ತು ‘ಪ್ರಸಾರ ಭಾರತಿ’ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು