ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನ ಬಜೆಟ್‌ ಅಧಿವೇಶನ ಮುಕ್ತಾಯ

ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅನುವು:
Last Updated 25 ಮಾರ್ಚ್ 2021, 17:57 IST
ಅಕ್ಷರ ಗಾತ್ರ

ನವದೆಹಲಿ: ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಸತ್‌ನ ಬಜೆಟ್‌ ಅಧಿವೇಶನವು ನಿಗದಿಪಡಿಸಿದ ಅವಧಿಗೆ ಮುನ್ನವೇ ಗುರುವಾರ ಮುಕ್ತಾಯಗೊಂಡಿತು.

ರಾಜಕೀಯ ಮುಖಂಡರಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಏಪ್ರಿಲ್‌ 8ರವರೆಗೆ ನಿಗದಿಯಾಗಿದ್ದ ಅಧಿವೇಶನವನ್ನು ನಿರೀಕ್ಷೆಯಂತೆಯೇ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮತ್ತಿತರ ಪ್ರಮುಖರು ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಪಾಲ್ಗೊಂಡಿದ್ದರು.

ಜನವರಿ 23ರಂದು ಪ್ರಾರಂಭವಾದ ಬಜೆಟ್‌ ಅಧಿವೇಶನ 24 ದಿನ ನಡೆದಿದ್ದರೂ, ವಿವಿಧ ವಿಷಯಗಳ ಕುರಿತ ಚರ್ಚೆಗೆ ಅವಕಾಶ ದೊರೆಯದ ಕಾರಣ ಆಡಳಿತಾರೂಢ ಎನ್‌ಡಿಎ ಸರ್ಕಾರ ವಿರೋಧ ಪಕ್ಷಗಳ ಟೀಕೆಯನ್ನು ಎದುರಿಸಬೇಕಾಯಿತು.

ತೈಲ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಳ ಹಾಗೂ ಕೃಷಿ ಕಾಯ್ದೆ ತಿದ್ದುಪಡಿ ಕುರಿತಂತೆ ವಿಪಕ್ಷಗಳಿಗೆ ಸಮಗ್ರ ಚರ್ಚೆಗೆ ಅವಕಾಶ ನೀಡದ್ದರಿಂದ ಮಾರ್ಚ್ 8ರಂದು ಪ್ರಾರಂಭವಾದ ಬಜೆಟ್‌ ಅಧಿವೇಶನದ ದ್ವಿತಿಯ ಭಾಗದ ಮೊದಲ ಮೂರು ದಿನಗಳ ಕಲಾಪವು ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕೊರೊನಾ ಪೀಡಿತರಾಗಿರುವ ಕಾರಣ ಅಧಿವೇಶನದ ಕೊನೆಯ ದಿನ ಸ್ಪೀಕರ್‌ ಸ್ಥಾನದಲ್ಲಿ ಆಸೀನರಾಗಿದ್ದ ಬಿಜು ಜನತಾದಳದ (ಬಿಜೆಡಿ) ಹಿರಿಯ ಸದಸ್ಯ ಭರ್ತೃಹರಿ ಮೆಹತಾಬ್‌ ಸಮಾರೋಪ ಭಾಷಣ ಮಾಡಿದರು.

‘ಬಜೆಟ್‌ ಅಧಿವೇಶನದ ಸಂದರ್ಭ ಲೋಕಸಭೆಯಲ್ಲಿ 24 ದಿನ, 134 ಗಂಟೆಗಳ ಕಾಲ ಕಲಾಪ ನಡೆದಿದ್ದು, ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸಿ, ಮಹತ್ವದ 18 ಮಸೂದೆಗಳನ್ನು ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ 23 ದಿನ, 104 ಗಂಟೆ 23 ನಿಮಿಷ ಕಲಾಪ ನಡೆದಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸುದ್ದಿಗಾರರಿಗೆ ತಿಳಿಸಿದರು.

‘ಸಂಸತ್‌ ಸದಸ್ಯತ್ವದ 17 ವರ್ಷಗಳ ನನ್ನ ಅನುಭವದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷಗಳ ಒಂದೂ ಬೇಡಿಕೆಯತ್ತ ಅಧ್ಯಕ್ಷರು ಗಮನ ಹರಿಸಲಿಲ್ಲ. ಯಾವುದೇ ಚರ್ಚೆಗೂ ನಮಗೆ ಅವಕಾಶ ದೊರೆಯಲಿಲ್ಲ’ ಎಂದು ರಾಜ್ಯಸಭೆ ಸದಸ್ಯ, ಕಾಂಗ್ರೆಸ್‌ನಜೈರಾಮ್ ರಮೇಶ್ ಸುದ್ದಿಗಾರರೆದುರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT