ಶನಿವಾರ, ಮಾರ್ಚ್ 25, 2023
28 °C
ಪಿಎಂ 2.5 ಮಟ್ಟ ಇರುವ ಪ್ರದೇಶಗಳಲ್ಲಿ ಸೋಂಕು ಗರಿಷ್ಠ

ಮಾಲಿನ್ಯ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚು: ಅಧ್ಯಯನ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಲಿನ್ಯಕಾರಕ ಕಣಗಳು(ಪಿ.ಎಂ) 2.5ರಷ್ಟು ಇರುವ ಪ್ರದೇಶಗಳಲ್ಲಿ ವಾಸಿಸುವ ಜನತೆ ಕೋವಿಡ್‌–19 ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎನ್ನುವುದು ಅಧ್ಯಯನ ವರದಿಯೊಂದು ತಿಳಿಸಿದೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಪುಣೆ, ಅಹಮದಾಬಾದ್‌, ವಾರಾಣಸಿ, ಲಖನೌ ಮತ್ತು ಸೂರತ್‌ ಸೇರಿದಂತೆ 16 ಪ್ರಮುಖ ನಗರಗಳಲ್ಲಿ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಈ ನಗರಗಳಲ್ಲೇ ಪಿಎಂ 2.5 ಹೊರಸೂಸುವಿಕೆಯೂ ಹೆಚ್ಚಾಗಿದೆ ಎಂದು ತಿಳಿಸಿದೆ.

ದೇಶದ 721 ಜಿಲ್ಲೆಗಳಲ್ಲಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಪಿಎಂ2.5 ಹೊರಸೂಸುವಿಕೆ ಮತ್ತು ಕೋವಿಡ್‌–19 ಸೋಂಕಿಗೆ ನಡುವೆ ಸಂಬಂಧ ಇರುವುದು ಅಧ್ಯಯನ ಸಂದರ್ಭದಲ್ಲಿ ತಿಳಿದು ಬಂದಿದೆ. ಇದೇ ಕಾರಣಕ್ಕೆ ಹಲವು ಸಾವುಗಳು ಸಹ ಸಂಭವಿಸಿವೆ ಎಂದು ಅಧ್ಯಯನ ನಡೆಸಿರುವ ಗುಫ್ರಾನ್‌ ಬೇಗ್‌ ವಿವರಿಸಿದ್ದಾರೆ. ಬೇಗ್‌ ಅವರು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನೆಯ (ಎಸ್‌ಎಎಫ್‌ಎಆರ್‌) ನಿರ್ದೇಶಕರಾಗಿದ್ದಾರೆ.

ಭುವನೇಶ್ವರದ ಉತ್ಕಲ್‌ ವಿಶ್ವವಿದ್ಯಾಲಯ, ಪುಣೆಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿ (ಐಐಟಿಎಂ), ರೂರ್ಕೆಲಾದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಭುವನೇಶ್ವರದ ಐಐಟಿ ತಜ್ಞರು, ವಾಯು ಗುಣಮಟ್ಟ ಮತ್ತು ಕೋವಿಡ್‌–19 ಪ್ರಕರಣಗಳು ಮತ್ತು ಸಾವುಗಳು ಕುರಿತು ಕಳೆದ ವರ್ಷ ನವೆಂಬರ್‌ 5ರವರೆಗೆ ಅಧ್ಯಯನ ಕೈಗೊಂಡು ವರದಿ ಸಿದ್ಧಪಡಿಸಿದ್ದಾರೆ.

‘ಪಿಎಂ 2.5’ ಎನ್ನುವುದು ಸೂಕ್ಷ್ಮ ಕಣಗಳಾಗಿದ್ದು, ದೇಹದ ಒಳಗೆ ಸೇರಿ ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ. ಇದರಿಂದ, ಉಸಿರಾಟದ ಸಮಸ್ಯೆಯಾಗುತ್ತದೆ. ಜತೆಗೆ, ರೋಗ ನಿರೋಧಕ ಶಕ್ತಿಯನ್ನು ಸಹ ಕುಂದಿಸುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಬಿಹಾರ, ಕರ್ನಾಟಕ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಪತ್ತೆಯಾಗಿವೆ. ಈ ಪ್ರದೇಶಗಳಲ್ಲಿ ಪಿಎಂ2.5 ಅತಿ ಹೆಚ್ಚು ಇರುವುದು ದೃಢಪಟ್ಟಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ವಾಯು ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ವರ್ಷದ 288 ದಿನಗಳು ಮಾಲಿನ್ಯವು ಅತಿ ಹೆಚ್ಚಾಗಿರುತ್ತದೆ. ಈ ನಗರದಲ್ಲಿ ಕಳೆದ ವರ್ಷದ ನವೆಂಬರ್‌ 5ರವರೆಗೆ 4.38 ಲಕ್ಷ ಪ್ರಕರಣಗಳು ಪತ್ತೆಯಾಗಿವೆ ಮತ್ತು 6,989 ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.

 ಇದೇ ರೀತಿ ಬೆಂಗಳೂರಿನಲ್ಲಿ ವರ್ಷದ 39 ದಿನಗಳಲ್ಲಿ ಅತಿ ಹೆಚ್ಚು ಮಾಲಿನ್ಯ ದಾಖಲಾಗುತ್ತದೆ. ಈ ನಗರದಲ್ಲಿ 3.65 ಲಕ್ಷ ಕೋವಿಡ್‌–19 ಪ್ರಕರಣಗಳು 4,086 ಸಾವುಗಳು ಸಂಭವಿಸಿವೆ ಎಂದು ವಿವರಿಸಿದೆ.

ಇದನ್ನೂ ಓದಿ... ವೈರಲ್ ವಿಡಿಯೊ: ಬಾಸ್ಕೆಟ್‌ಬಾಲ್ ಆಡಿದ ಪ್ರಜ್ಞಾ ಸಿಂಗ್; ಕಾಂಗ್ರೆಸ್‌ಗೆ ಅಚ್ಚರಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು