ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಇನ್ನೂ ಬಾಕಿ ಇದೆ: ಸಮೀರ್ ವಾಂಖೆಡೆಗೆ ಸಚಿವ ನವಾಬ್ ಮಲಿಕ್ ಸವಾಲು

Last Updated 28 ಅಕ್ಟೋಬರ್ 2021, 16:10 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್, ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದು, ‘ಪಿಕ್ಚರ್ ಅಭಿ ಬಾಕಿ ಹೈ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್‌ ಸ್ಟಾರ್ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡುತ್ತಿದ್ದಂತೆ ಮಲಿಕ್ ಈ ರೀತಿ ಟ್ವೀಟ್ ಮಾಡಿದ್ದಾರೆ. ,

ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ವು ಬಂಧಿಸಿದ ಮೂರು ವಾರಗಳ ನಂತರ ಆರ್ಯನ್ ಖಾನ್ ಮತ್ತು ಇತರ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಆರ್ಯನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರನ್ನು ಎನ್‌ಸಿಬಿ ಅಕ್ಟೋಬರ್ 3 ರಂದು ಬಂಧಿಸಿತ್ತು. ನಿಷೇಧಿತ ಡ್ರಗ್ಸ್ ಇಟ್ಟುಕೊಂಡಿರುವುದು, ಸೇವನೆ, ಮಾರಾಟ/ಖರೀದಿ, ಪಿತೂರಿ ಸೇರಿ ಮಾದಕ ವಸ್ತು ತಡೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮಲಿಕ್ ಅವರು ಐಷಾರಾಮಿ ಹಡಗಿನ ಡ್ರಗ್ಸ್ ಪ್ರಕರಣ ‘ನಕಲಿ’ಎಂದು ಪದೇ ಪದೇ ಹೇಳಿದ್ದಾರೆ. ಸಮೀರ್ ವಾಂಖೆಡೆ ವಿರುದ್ಧ ಅಕ್ರಮ ಫೋನ್ ಕದ್ದಾಲಿಕೆ ಮತ್ತು ಉದ್ಯೋಗ ಪಡೆಯಲು ನಕಲಿ ದಾಖಲೆಗಳ ಸೃಷ್ಟಿ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ.

ಗುರುವಾರ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೊ ಸಂದೇಶದಲ್ಲಿ, ಮಲಿಕ್, ‘ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿದ ಅಧಿಕಾರಿ (ವಾಂಖೆಡೆ) ಈಗ ಮುಂಬೈ ಪೊಲೀಸರು ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ಕೋರಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅವರು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಕಳೆದ ವಾರ ರಕ್ಷಣೆಯನ್ನು ಕೋರಿದರು. ಅವರು ನಿಜವಾಗಿಯೂ ಏನಾದರೂ ತಪ್ಪು ಮಾಡಿರಬೇಕು ಮತ್ತು ಅದಕ್ಕಾಗಿಯೇ ಅವರು ಹೆದರುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಈ ಮಧ್ಯೆ, ಸಮೀರ್ ವಾಂಖೆಡೆ ವಿರುದ್ಧ ಬಂಧನದಂತಹ ಯಾವುದೇ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದರೆ 72 ಗಂಟೆಗಳ ಮೊದಲು ನೋಟಿಸ್ ಮೂಲಕ ಅವರ ಬಂಧನದ ಸೂಚನೆ ನೀಡುವುದಾಗಿ ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಈ ಮಾದಕ ವಸ್ತು ಪ್ರಕರಣವು ಸಂಪೂರ್ಣವಾಗಿ ಬೋಗಸ್ ಎಂದು ನನ್ನ ಹಿಂದಿನ ಹೇಳಿಕೆಗಳನ್ನು ನಾನು ಪುನರುಚ್ಚರಿಸುತ್ತೇನೆ. ಈ ಪ್ರಕರಣದಲ್ಲಿ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಮಲಿಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT