ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಚರಗಳಿಗೆ ಕಂಟಕವಾದ ಪ್ಲಾಸ್ಟಿಕ್‌ ಬಲೆ

ಮೀನುಗಾರಿಕೆ ಬಲೆ ಬಿಸಾಡುವುದರಿಂದ ಗಂಗಾನದಿ ಪರಿಸರ ಮತ್ತಷ್ಟು ಕಲುಷಿತ
Last Updated 30 ನವೆಂಬರ್ 2020, 8:21 IST
ಅಕ್ಷರ ಗಾತ್ರ

ನವದೆಹಲಿ: ಮೀನುಗಾರಿಕೆಗೆ ಬಳಸುವ ಪ್ಲಾಸ್ಟಿಕ್‌ ಬಲೆಗಳನ್ನು ಗಂಗಾ ನದಿಯಲ್ಲಿ ಬಿಸಾಡಲಾಗುತ್ತಿದೆ. ಇದು ಮೂರುಪಟ್ಟಿ ಇರುವ ಆಮೆ, ಗಂಗಾ ನದಿಯಲ್ಲಿ ಕಂಡು ಬರುವ ವಿಶಿಷ್ಟ ಡಾಲ್ಫಿನ್‌ ಸೇರಿದಂತೆ ಅಳಿವಿನಂಚಿನಲ್ಲಿರುವ ಜಲಚರಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಅಂತರರಾಷ್ಟ್ರೀಯ ತಜ್ಞರು ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ಸಂಶೋಧಕರನ್ನು ಒಳಗೊಂಡ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, ಸೈನ್ಸ್‌ ಆಫ್‌ ಟೋಟಲ್‌ ಎನ್ವಿರಾನ್‌ಮೆಂಟ್‌ ಎಂಬ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಗಂಗೆ ಉಗಮವಾಗಿ, ತನ್ನ ಪಯಣ ಆರಂಭಿಸುವ ಹಿಮಾಲಯದಿಂದ ಹಿಡಿದು ಬಾಂಗ್ಲಾದೇಶದಲ್ಲಿ ಸಮುದ್ರ ಸೇರುವ ಸ್ಥಳದವರೆಗೆ ತಜ್ಞರ ತಂಡ ಅಧ್ಯಯನ ನಡೆಸಿದೆ.

ನದಿಯು ಸಮುದ್ರವನ್ನು ಸೇರುವ ಸ್ಥಳದ ಬಳಿ ಗರಿಷ್ಠ ಪ್ರಮಾಣದ ಮೀನುಗಾರಿಕೆ ಬಲೆಗಳು ಕಂಡು ಬಂದಿವೆ. ಅದರಲ್ಲೂ, ಪ್ಲಾಸ್ಟಿಕ್‌ ಬಳಸಿ ತಯಾರಿಸಿದ ಬಲೆಗಳ ಪ್ರಮಾಣವೇ ಅಧಿಕ ಎಂದು ಈ ಅಧ್ಯಯನ ವರದಿ ಹೇಳುತ್ತದೆ.

‘ಒಳನಾಡು ಮೀನುಗಾರಿಕೆಗೆ ಗಂಗಾ ನದಿ ಪ್ರಸಿದ್ಧ. ಜಗತ್ತಿನಲ್ಲಿಯೇ ಇಲ್ಲಿ ಗರಿಷ್ಠ ಒಳನಾಡು ಮೀನುಗಾರಿಕೆ ನಡೆಯುತ್ತಿದೆ. ಆದರೆ, ಪ್ಲಾಸ್ಟಿಕ್‌ನಿಂದ ಈ ನದಿ ಪರಿಸರಕ್ಕೆ ಆಗುತ್ತಿರುವ ಧಕ್ಕೆ, ಜಲಚರಗಳು ಹಾಗೂ ಇತರ ಜೀವಿಗಳ ಮೇಲೆ ಇದರಿಂದ ಆಗುತ್ತಿರುವ ಪರಿಣಾಮ ಕುರಿತಂತೆ ವ್ಯಾಪಕ ಅಧ್ಯಯನ ನಡೆದಿಲ್ಲ’ ಎಂದು ಬ್ರಿಟನ್‌ನ ಎಕ್ಸಿಟರ್ ವಿಶ್ವವಿದ್ಯಾಲಯದ ಸಂಶೋಧಕಿ ಸಾರಾ ನೆಲ್ಮ್ಸ್ ಹೇಳಿದರು.

‘ಪ್ಲಾಸ್ಟಿಕ್‌ ತಿನ್ನುವುದರಿಂದ ವನ್ಯಜೀವಿಗಳಿಗೆ ಅಪಾಯ ತಪ್ಪಿದ್ದಲ್ಲ. ಆದರೆ, ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಲೆಗಳಲ್ಲಿ ಸಿಕ್ಕಿ ಹಾಕುವ ಜಲಚರಗಳು ಗಾಯಗೊಳ್ಳುತ್ತವೆ. ಕೆಲವೊಮ್ಮೆ ಜೀವ ಕಳೆದುಕೊಳ್ಳುತ್ತವೆ. ಈ ವಿದ್ಯಮಾನದ ಬಗ್ಗೆಯೇ ಒತ್ತು ನೀಡಿ, ಅಧ್ಯಯನ ಕೈಗೊಳ್ಳಲಾಗಿದೆ’ ಎಂದೂ ಸಾರಾ ಹೇಳಿದರು.

‘ಮೀನುಗಾರಿಕೆಗೆ ಬಳಸಿದ ಬಲೆಗಳನ್ನು ಮರು ಬಳಕೆ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಬಲೆಗಳನ್ನು ಮರುಬಳಕೆ ಮಾಡಲು ಪ್ರಯತ್ನಿಸುತ್ತೇವೆ. ಹಾಗೊಂದು ವೇಳೆ ಮರುಬಳಕೆ ಸಾಧ್ಯವಾಗದಿದ್ದಾಗ ಬಲೆಗಳನ್ನು ನದಿಯಲ್ಲಿ ಬಿಸಾಡುತ್ತೇವೆ ಎಂಬುದಾಗಿ ಅನೇಕ ಮೀನುಗಾರರು ತಿಳಿಸಿದ್ದಾರೆ’ ಎಂದೂ ಹೇಳಿದರು.

‘ಬಲೆಗಳ ಮರುಬಳಕೆ ಸಾಧ್ಯವಿದೆ. ಬಹುತೇಕ ಬಲೆಗಳನ್ನು ನೈಲಾನ್‌ 6 ಎಂಬ ವಸ್ತುವಿನಿಂದ ತಯಾರಿಸಲಾಗಿರುತ್ತದೆ. ಮೀನುಗಾರಿಕೆಗೆ ಅಗತ್ಯ ಇಲ್ಲ ಎಂದಾದಾಗ ಅದನ್ನು ಬಿಸಾಡುವ ಬದಲು ಕಾರ್ಪೆಟ್‌, ವಿವಿಧ ವಸ್ತ್ರ ತಯಾರಿಕೆಗೆ ನೈಲಾನ್‌ 6 ಅನ್ನು ಬಳಸಬಹುದು’ ಎಂದು ಝೂಲಾಜಿಕಲ್‌ ಸೊಸೈಟಿ ಆಫ್‌ ಲಂಡನ್‌ನ ಪ್ರಾಧ್ಯಾಪಕಿ ಹೀಥರ್ ಕೋಲ್ಡ್‌ವಿ ಅಭಿಪ್ರಾಯಪಡುತ್ತಾರೆ.

‘ನೈಲಾನ್ ‌6 ಅನ್ನು ಮರುಬಳಕೆ ಮಾಡುವುದರಿಂದ ನದಿ ಪರಿಸರದಲ್ಲಿ ಪ್ಲಾಸ್ಟಿಕ್‌ನಿಂದ ಆಗುವ ಮಾಲಿನ್ಯವನ್ನು ತಡೆಗಟ್ಟಿದಂತಾಗುತ್ತದೆ. ಕೆಲವರಿಗೆ ಆದಾಯದ ಮೂಲವೂ ಆಗಲಿದೆ’ ಎಂದೂ ಅವರು ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT