ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸಮುದಾಯದ ಸುರಕ್ಷತೆಗೆ ಆದ್ಯತೆ: ಆಸ್ಟ್ರೇಲಿಯಾದ ಪ್ರಧಾನಿ ಭರವಸೆ

ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲೆ ದಾಳಿ: ಮೋದಿ ಕಳವಳ
Last Updated 10 ಮಾರ್ಚ್ 2023, 12:31 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಸಮುದಾಯಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರಿಗೆ ತಿಳಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿಯ ಸಮ್ಮುಖದಲ್ಲಿ ಈ ಕುರಿತು ಪ್ರಸ್ತಾಪಿಸಿದ ಮೋದಿ ಅವರು, ‘ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯದ ದೇವಸ್ಥಾನಗಳ ಮೇಲಿನ ದಾಳಿಯ ವರದಿಗಳು ನಿರಂತರವಾಗಿ ಬರುತ್ತಿರುವುದು ವಿಷಾದದ ಸಂಗತಿ’ ಎಂದು ಹೇಳಿದ್ದಾರೆ.

‘ಈ ಕುರಿತ ನಮ್ಮ ಭಾವನೆ ಮತ್ತು ಕಳವಳವನ್ನು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರಿಗೆ ತಿಳಿಸಿದ್ದೇನೆ. ಈ ವೇಳೆ ಅವರು ಭಾರತೀಯ ಸಮುದಾಯದ ಸುರಕ್ಷತೆಗೆ ವಿಶೇಷ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ವಿಷಯ ಸಂಬಂಧ ಉಭಯ ದೇಶಗಳ ತಂಡಗಳು ನಿರಂತರ ಸಂಪರ್ಕದಲ್ಲಿದ್ದು ಮತ್ತು ಸಾಧ್ಯವಾದಷ್ಟು ಸಹಕಾರ ನೀಡಲಿವೆ’ ಎಂದು ಮೋದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಭಯ ನಾಯಕರು ತಮ್ಮ ಮೊದಲ ಶೃಂಗಸಭೆಯಲ್ಲಿ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ಮತ್ತು ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಭದ್ರತಾ ಸಹಕಾರ ಹೆಚ್ಚಿಸುವ ಕುರಿತು ಬದ್ಧತೆ ತೋರಿದ್ದಾರೆ.

ನಾಲ್ಕು ಒಪ್ಪಂದಗಳಿಗೆ ಸಹಿ:

ಮೋದಿ ಮತ್ತು ಅಲ್ಬನೀಸ್‌ ನಡುವಿನ ಮಾತುಕತೆಯ ಬಳಿಕ ಎರಡೂ ದೇಶಗಳ ನಡುವೆ ಕ್ರೀಡೆ, ನಾವೀನ್ಯತೆ, ಶ್ರವ್ಯ– ದೃಶ್ಯ ಉತ್ಪನ್ನಗಳ ಉತ್ಪಾದನೆ, ಸೌರಶಕ್ತಿ ಕ್ಷೇತ್ರಗಳಲ್ಲಿ ಸಹಕಾರ ಒದಗಿಸುವ ಕುರಿತು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಉಭಯ ನಾಯಕರ ಶೃಂಗದಲ್ಲಿ ಶುದ್ಧ ಇಂಧನ, ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ನಿರ್ಣಾಯಕ ಖನಿಜಗಳು, ವಲಸೆ, ಪೂರೈಕೆ ಸರಪಳಿಗಳು, ಶಿಕ್ಷಣ, ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆದಿವೆ.

ಈ ವರ್ಷವೇ ಸಿಇಸಿಎ ಅಂತಿಮ:

‘ಭಾರತ– ಆಸ್ಟ್ರೇಲಿಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು (ಸಿಇಸಿಎ) ಆದಷ್ಟು ಬೇಗ ಅಂತಿಮಗೊಳಿಸಲು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ಈ ವರ್ಷವೇ ಇದನ್ನು ಅಂತಿಮಗೊಳಿಸುವ ಭರವಸೆ ನನಗಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌ ಮಾಹಿತಿ ನೀಡಿದರು.

ಎರಡೂ ದೇಶಗಳ ನಡುವಿನ ಮತ್ತೊಂದು ಮಹತ್ವದ ಒಪ್ಪಂದವಾದ ‘ಭಾರತ– ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಒಪ್ಪಂದ’ (ಇಸಿಟಿಎ) ಕಳೆದ ವರ್ಷ ಅಂತಿಮಗೊಂಡು, ಕಳೆದ ಡಿಸೆಂಬರ್‌ನಿಂದಲೇ ಜಾರಿಗೆ ಬಂದಿದೆ. ಇದೀಗ ಉಭಯ ರಾಷ್ಟ್ರಗಳು ಸಿಇಸಿಎ ಅನ್ನು ಅಂತಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಇಂಡೊ– ಪೆಸಿಫಿಕ್‌ ಪ್ರದೇಶದ ಭದ್ರತೆಗೆ ಒತ್ತು:

ದ್ವಿಪಕ್ಷೀಯ ಭದ್ರತಾ ಸಹಕಾರವು ಎರಡೂ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ‘ನಾವು ಇಂದು ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಕಡಲ ಭದ್ರತೆ, ಪರಸ್ಪರ ರಕ್ಷಣೆ ಹಾಗೂ ಭದ್ರತಾ ಸಹಕಾರ ಹೆಚ್ಚಿಸುವ ಕುರಿತು ಚರ್ಚಿಸಿದ್ದೇವೆ’ ಎಂದು ತಿಳಿಸಿದರು.

‘ರಕ್ಷಣಾ ಕ್ಷೇತ್ರದಲ್ಲಿ ಕೆಲ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ಪ್ರಮುಖ ಒಪ್ಪಂದಗಳು ನಡೆದಿವೆ. ಇದು ಪರಸ್ಪರರ ಸೇನೆಗೆ ಲಾಜಿಸ್ಟಿಕ್‌ ಬೆಂಬಲಗಳನ್ನೂ ಒಳಗೊಂಡಿದೆ. ಅಲ್ಲದೆ ಭದ್ರತಾ ಏಜೆನ್ಸಿಗಳ ನಡುವೆ ನಿಯಮಿತವಾಗಿ ಮತ್ತು ಉಪಯುಕ್ತ ಮಾಹಿತಿ ವಿನಿಮಯವೂ ನಡೆಯುತ್ತಿದ್ದು ಅದನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ’ ಎಂದು ಮೋದಿ ಮಾಹಿತಿ ನೀಡಿದರು.

ಮಲಬಾರ್‌ ನೌಕಾ ಸಮರಾಭ್ಯಾಸ:

ಆಸ್ಟ್ರೇಲಿಯಾ ಪ್ರಸಕ್ತ ವರ್ಷ ಮಲಬಾರ್‌ ನೌಕಾ ಸಮರಾಭ್ಯಾಸ ಆಯೋಜಿಸುತ್ತಿರುವುದು ಹೆಮ್ಮ ತರಿಸಿದೆ ಎಂದು ಅಲ್ಬನೀಸ್ ತಿಳಿಸಿದರು.

‘ಹೊಸ ವಲಸೆ ಪಾಲುದಾರಿಕೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳು, ಪದವೀಧರರು, ಶೈಕ್ಷಣಿಕ ಸಂಶೋಧಕರು, ವ್ಯಾಪಾರಸ್ಥರು ಮತ್ತು ಇತರ ವೃತ್ತಿಪರರ ವಲಸೆಯನ್ನು ಉತ್ತೇಜಿಸುತ್ತದೆ ಮತ್ತು ಬೆಂಬಲಿಸುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT