ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿ ಕಾರ್ಡ್‌’ ವಿತರಿಸುವ ‘ಸ್ವಾಮಿತ್ವ’ ಯೋಜನೆಗೆ 11ರಂದು ಪ್ರಧಾನಿ ಚಾಲನೆ

Last Updated 9 ಅಕ್ಟೋಬರ್ 2020, 13:22 IST
ಅಕ್ಷರ ಗಾತ್ರ

ನವದೆಹಲಿ: ಆಸ್ತಿ ಒಡೆತನಕ್ಕೆ ಸಂಬಂಧಿಸಿದ ಕಾರ್ಡ್‌ಗಳನ್ನು ವಿತರಿಸುವ ‘ಸ್ವಾಮಿತ್ವ’ (ಮಾಲೀಕತ್ವ) ಯೋಜನೆಗೆ ಅ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಗ್ರಾಮೀಣ ಭಾರತವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎನ್ನಲಾಗಿದೆ.

ಸಾಲ ಪಡೆಯಲು ಹಾಗೂ ಇತರೆ ಆರ್ಥಿಕ ನೆರವುಗಳನ್ನು ಪಡೆಯಲು ಗ್ರಾಮೀಣ ಜನರು ಈ ಕಾರ್ಡ್‌ಗಳನ್ನು ಬಳಕೆ ಮಾಡಬಹುದಾಗಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಗ್ರಾಮೀಣ ಜನರು, ಅವರ ಮೊಬೈಲ್‌ ಫೋನ್‌ಗೆ ಕಳುಹಿಸಲಾದ ಲಿಂಕ್‌ ಬಳಸಿ ‘ಆಸ್ತಿ ಕಾರ್ಡ್’‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ತದ ನಂತರ ಆಯಾ ರಾಜ್ಯ ಸರ್ಕಾರಗಳು ಇಂಥ ಕಾರ್ಡ್‌ ವಿತರಿಸಲು ಕ್ರಮವಹಿಸಲಿವೆ.

ಕರ್ನಾಟಕದ ಎರಡು ಗ್ರಾಮಗಳು ಒಳಗೊಂಡು ಆರು ರಾಜ್ಯಗಳ 763 ಗ್ರಾಮಗಳಿಂದ ಫಲಾನುಭವಿಗಳನ್ನು ಗುರುತಿಸಲಾಗಿದೆ. ಉಳಿದಂತೆ ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100 ಮತ್ತು ಮಧ್ಯಪ್ರದೇಶದ 44 ಗ್ರಾಮಗಳು ಸೇರಿವೆ.

ಮಹಾರಾಷ್ಟ್ರವನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಫಲಾನುಭವಿಗಳಿಗೆ ಒಂದೇ ದಿನದಲ್ಲಿ ವ್ಯಕ್ತಿಗತವಾಗಿ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕಾರ್ಡ್ ವಿತರಣೆಗೆ ಸಾಂಕೇತಿಕವಾಗಿ ಶುಲ್ಕ ಪಡೆಯುವ ವ್ಯವಸ್ಥೆ ಇದ್ದು, ಅಲ್ಲಿ ಇನ್ನೊಂದು ತಿಂಗಳು ವಿಳಂಬವಾಗಬಹುದು ಎಂದು ತಿಳಿಸಿದೆ.

‘ಸ್ವಾಮಿತ್ವ’ ಎಂಬುದು ಪಂಚಾಯತ್ ರಾಜ್ ಸಚಿವಾಲಯದ ಯೋಜನೆಯಾಗಿದ್ದು, ರಾಷ್ಟ್ರೀಯ ಪಂಚಾಯತ್‌ ದಿನವಾದ ಏ. 24ರಂದು ಘೋಷಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕುಟುಂಬಗಳ ಮಾಲೀಕರಿಗೆ ಆಸ್ತಿ ಒಡೆತನ ಕುರಿತ ಕಾರ್ಡ್‌ಗಳನ್ನು ನೀಡುವುದು ಯೋಜನೆ ಉದ್ದೇಶ. ನಾಲ್ಕು ವರ್ಷಗಳಳಲ್ಲಿ ಹಂತ ಹಂತವಾಗಿ ದೇಶದಾದ್ಯಂತ ಯೋಜನೆ ಜಾರಿಗೆ ಬರಲಿದ್ದು, ಒಟ್ಟು 6.62 ಲಕ್ಷ ಗ್ರಾಮಗಳನ್ನು ಒಳಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT