ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ವಿಶ್ವನಾಥ ಧಾಮ ಉದ್ಘಾಟನೆ: ಕಾರ್ಮಿಕರಿಗೆ ಹೂಮಳೆಗರೆದ ಮೋದಿ

ಅಧ್ಯಾತ್ಮ ಪ್ರಜ್ಞೆಗೆ ಚೈತನ್ಯ ತುಂಬಿದ ಕಾಶಿ: ಪ್ರಧಾನಿ ಪ್ರತಿಪಾದನೆ
Last Updated 13 ಡಿಸೆಂಬರ್ 2021, 21:45 IST
ಅಕ್ಷರ ಗಾತ್ರ

ವಾರಾಣಸಿ: ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಯ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕಾರ್ಮಿಕರ ಗುಂಪಿನ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೂಮಳೆಗರೆದರು. ಹೊಸದಾಗಿ ನಿರ್ಮಿಸಲಾದ ಸಂಕೀರ್ಣದಲ್ಲಿ, ಕಾರ್ಮಿಕ ಜತೆಯಲ್ಲಿಯೇ ಮೋದಿ ಅವರು ಊಟ ಮಾಡಿದರು.

ದೇಶದ ವಿವಿಧ ಭಾಗಗಳ ಕಾರ್ಮಿಕರು, ಎಂಜಿನಿಯರ್‌ಗಳು, ಕುಶಲಕರ್ಮಿಗಳು ಕಾರಿಡಾರ್‌ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಪ್ರಾಚೀನ ದೇವಾಲಯ ಪ್ರದೇಶದ ಇಡೀ ಪ್ರದೇಶಕ್ಕೆ ಕಾಶಿ ವಿಶ್ವನಾಥ ಧಾಮ ಎಂದು ಹೆಸರು ಇರಿಸಲಾಗಿದೆ.

ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೋದಿ ಅವರು ದೇವಾಲಯದ ಗ್ಯಾಲರಿಯ ತಾರಸಿಯ ಮೇಲೆ ಕಾರ್ಮಿಕರ ಗುಂಪನ್ನು ಭೇಟಿಯಾದರು. ಕೈಯಲ್ಲಿ ಹೂವಿನ ಬುಟ್ಟಿ ಹಿಡಿದು ಕಾರ್ಮಿಕರ ಜತೆಗೆ ಅವರು ಹೆಜ್ಜೆ ಹಾಕಿದರು. ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಧರಿಸುವ ಜಾಕೆಟ್‌ ಧರಿಸಿದ್ದ ಕಾರ್ಮಿಕರು ಚಪ್ಪಾಳೆ ತಟ್ಟಿ, ಮೋದಿ ಅವರಿಗೆ ಕೈಮುಗಿದರು.

ಗ್ಯಾಲರಿಯಲ್ಲಿ ಹಾಸಿದ್ದ ಕೆಂಪು ಹಾಸಿನ ಮೇಲೆ ಕಾರ್ಮಿಕರ ಜತೆಯೇ ಪ್ರಧಾನಿ ಕುಳಿತರು. ಕೈ ಸನ್ನೆ ಮಾಡಿ ಇನ್ನೂ ಹತ್ತಿರ ಬರುವಂತೆ ಸೂಚಿಸಿದರು. ಅವರ ಜತೆ ಫೋಟೊ ತೆಗೆಸಿಕೊಂಡರು. ಮೋದಿ ಮತ್ತು ಉತ್ತರ ಪ‍್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬೃಹತ್‌ ಚಿತ್ರಗಳಿರುವ ಬ್ಯಾನರ್‌ ಹಿನ್ನೆಲೆಯಲ್ಲಿ ಇತ್ತು. ‘ಕನಸಿನ ಕಾಶಿ’ಯನ್ನು ನನಸು ಮಾಡಿದ್ದಕ್ಕಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಲು ಈ ಬ್ಯಾನರ್‌ ಅಳವಡಿಸಲಾಗಿತ್ತು.

ಕಾಶಿಯು ಮೊದಲಿನಿಂದಲೂ ‘ಅಧ್ಯಾತ್ಮ ಪ್ರಜ್ಞೆಯ ಕೇಂದ್ರ’ವಾಗಿತ್ತು. ಈಗ, ಹೊಸ ಭವ್ಯ ರೂಪದಲ್ಲಿ ಈ ಪ್ರಜ್ಞೆಗೆ ಚೈತನ್ಯ ತುಂಬಿದೆ’ ಎಂದು ಉದ್ಘಾಟನೆಯ ಬಳಿಕ ಮೋದಿ ಹೇಳಿದರು.ಒಟ್ಟು 23 ಕಟ್ಟಡಗಳನ್ನು ಸೋಮವಾರ ಉದ್ಘಾಟಿಸಲಾಗಿದೆ. ಒಟ್ಟು ₹339 ಕೋಟಿ ವೆಚ್ಚದಲ್ಲಿ ಮೊದಲ ಹಂತ ಪೂರ್ಣಗೊಂಡಿದೆ.

ಕೋವಿಡ್‌ ಸಾಂಕ್ರಾಮಿದ ಸಂದರ್ಭದಲ್ಲಿಯೂ ಯೋಜನೆಯ ಕಾಮಗಾರಿಯು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಂಡಿದೆ ಎಂದು ಪ್ರಧಾನಿ ಕಾರ್ಯಾಲಯವು ಭಾನುವಾರ ಹೇಳಿತ್ತು.

ಈಗ ಇರುವ ದೇವಾಲಯವನ್ನು ಮಹಾರಾಣಿ ಅಹಿಲ್ಯಾಬಾಯಿ ಹೋಲ್ಕರ್‌ ಅವರು 1780ರಲ್ಲಿ ನಿರ್ಮಿಸಿದ್ದರು. 19ನೇ ಶತಮಾನದಲ್ಲಿ ಮಹಾರಾಜ ರಂಜಿತ್‌ ಸಿಂಗ್‌ ಅವರು ದೇವಾಲಯಕ್ಕೆ ಚಿನ್ನದ ಗೋಪುರ ಅಳವಡಿಸಿದ್ದರು.

ಗಾಂಧೀಜಿ ಕನಸು ನನಸು: ಯೋಗಿ
ಭವ್ಯವಾದ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ಮೂಲಕ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ ಮಾತ್ರ ಇದು ಸಾಧ್ಯವಾಗಿದೆ ಎಂದರು.

ಕಾಶಿಯ ಕಿರಿದಾದ ಬೀದಿಗಳು ಮತ್ತು ಕೊಳಕನ್ನು ಕಂಡು ಮಹಾತ್ಮ ಗಾಂಧಿ ಅವರು ಸುಮಾರು ನೂರು ವರ್ಷಗಳ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಇಂದು, ವಿಶ್ವನಾಥ ಧಾಮವು ಹೊಸ ರೂಪ ಪಡೆದಿದೆ. ಈ ಮೂಲಕ ಗಾಂಧೀಜಿ ಅವರು ನೋವು ಮರೆಯಾಗಿಸಲು ಸಾಧ್ಯವಾಗಿದೆ ಎಂದು ಯೋಗಿ ಹೇಳಿದರು. ಕೆಲವರು ಅಧಿಕಾರಕ್ಕೆ ಏರುವುದಕ್ಕಾಗಿ ಗಾಂಧೀಜಿಯ ಹೆಸರನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ, ಭವ್ಯವಾದ ಕಾಶಿ ವಿಶ್ವನಾಥ ಧಾಮ ನಿರ್ಮಾಣದ ಗಾಂಧೀಜಿಯ ಕನಸು ಇದೇ ಮೊದಲ ಬಾರಿಗೆ ಈಡೇರಿದೆ ಎಂದರು.

ಅಂತ್ಯ ಸಮೀಪಿಸಿದಾಗ ಕಾಶಿಗೆ ಬರುತ್ತಾರೆ: ಅಖಿಲೇಶ್‌
ಇಟಾವಾ: ಅಂತ್ಯ ಸಮೀಪಿಸಿದಾಗ ಜನರು ಕಾಶಿಯಲ್ಲಿ ಬಂದು ಇರುತ್ತಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಕಾಶಿ ವಿಶ್ವನಾಥ ಧಾಮ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ದಿನವೇ ಅಖಿಲೇಶ್‌ ಈ ಹೇಳಿಕೆ ಕೊಟ್ಟಿದ್ದಾರೆ.

ಪ್ರಧಾನಿ ವಾರಾಣಸಿಗೆ ಬಂದಿದ್ದಾರೆ ಮತ್ತು ರಾಜ್ಯ ಸರ್ಕಾರವು ಒಂದಿಡೀ ತಿಂಗಳು ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕೇವಲ ಒಂದು ತಿಂಗಳೇ? ಅವರು ಇಲ್ಲಿ ಎರಡು ಇಲ್ಲ ಮೂರು ತಿಂಗಳು ಇರಬೇಕು. ವಾಸ್ತವ್ಯಕ್ಕೆ ಇದು ಬಹಳ ಒಳ್ಳೆಯ ಸ್ಥಳ. ಅಂತ್ಯ ಸಮೀಪಿಸಿದಾಗ ಜನರು ಬನಾರಸ್‌ಗೆ ಬರುತ್ತಾರೆ’ ಎಂದರು. ಹಿಂದೂ ನಂಬಿಕೆಯ ಪ್ರಕಾರ, ಜೀವನದ ಕೊನೆಯ ದಿನಗಳನ್ನು ಕಾಶಿಯಲ್ಲಿ ಕಳೆಯುವುದು ಒಳ್ಳೆಯದು.

ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಎಸ್‌ಪಿ ಹೇಳುತ್ತಿದೆ.

‘ನಮ್ಮ ನಿಮ್ಮ ಮುಂದೆ ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು. ಆದರೆ, ದೇವರ ಮುಂದೆ ಸುಳ್ಳು ಹೇಳುವುದನ್ನು ಅವರು ಬಿಡಬೇಕು’ ಎಂದು ಅಖಿಲೇಶ್‌ ಹೇಳಿದ್ದಾರೆ. ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಶ್ರೇಯ ಪಡೆಯಲು ಯತ್ನಿಸುವುದನ್ನು ಬಿಜೆಪಿ ಬಿಡಬೇಕು ಎಂದರು. ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆಗೆ ತಾವು ಮುಖ್ಯಮಂತ್ರಿಯಾಗಿದ್ದಾಗ ಒಪ್ಪಿಗೆ ನೀಡಲಾಗಿತ್ತು. ಅದರ ದಾಖಲೆಗಳು ತಮ್ಮ ಬಳಿ ಇವೆ ಎಂದು ಅಖಿಲೇಶ್‌ ಭಾನುವಾರ ಹೇಳಿದ್ದರು. 2012–2017ರ ಅವಧಿಯಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿತ್ತು. ಕಾಶಿ ವಿಶ್ವನಾಥ ದೇವಾಲಯ ಅಭಿವೃದ್ಧಿಯ ವಿಸ್ತೃತ ಯೋಜನಾ ಕರಡು ವರದಿಯನ್ನು 2015ರಲ್ಲೇ ಸಿದ್ಧಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT