ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಪ್ರಧಾನಿ ಭರವಸೆ 

ಜಮ್ಮು-ಕಾಶ್ಮೀರ ರಾಜಕೀಯ ನಾಯಕರ ಜತೆ ಪ್ರಧಾನಿ ಸಭೆ
Last Updated 24 ಜೂನ್ 2021, 20:15 IST
ಅಕ್ಷರ ಗಾತ್ರ

ನವದೆಹಲಿ: 'ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುತ್ತೇವೆ ಸಂಸತ್ತಿನಲ್ಲಿ ಭರವಸೆ ನೀಡಿದ್ದೆವು. ಆ ಮಾತಿಗೆ ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ' ಎಂದು ಜಮ್ಮು-ಕಾಶ್ಮೀರ ರಾಜಕೀಯ ಪಕ್ಷಗಳ ನಾಯಕರು ಹೇಳಿದ್ದಾರೆ.

ಪ್ರಧಾನಿ ನರೇದ್ರ ಮೋದಿ ಅವರ ಜತೆ ದೆಹಲಿಯಲ್ಲಿ ನಡೆದ ಸುದೀರ್ಘ ಚರ್ಚೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ರಾಜಕೀಯ ಪಕ್ಷಗಳ ನಾಯಕರು ಈ ಮಾತು ಹೇಳಿದ್ದಾರೆ. 2019ರ ಆಗಸ್ಟ್‌ 5ರಂದು ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ರದ್ದುಪಡಿಸಿದ ನಂತರ, ಅಲ್ಲಿನ ರಾಜಕೀಯ ನಾಯಕರು ಮತ್ತು ಕೇಂದ್ರ ಸರ್ಕಾರದ ಜತೆ ನಡೆದ ಮೊದಲ ಸಭೆ ಇದು.

ಸಭೆಗೆ ಯಾವುದೇ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರವು ನಿಗದಿ ಮಾಡಿರಲಿಲ್ಲ. ಆದರೆ ನಮ್ಮ ಬೇಡಿಕೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜಮ್ಮು ಕಾಶ್ಮೀರದ ನಾಯಕರು ಮತ್ತು ಗುಪ್ಕಾರ್ ಕೂಟದ ನಾಯಕರು ಹೇಳಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರದ ಎಲ್ಲಾ ನಾಯಕರೂ, ರಾಜ್ಯದ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿದರು.

'ಈ ಸಭೆಯಲ್ಲಿ ಜಮ್ಮು-ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದೆವು. ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ನಡೆಯಬೇಕು. ಚುನಾವಣೆ ನಡೆಯಬೇಕು. ಶಾಂತಿಯುತವಾಗಿ ನಡೆಯುವ ಚುನಾವಣೆಯು, ರಾಜ್ಯದ ಸ್ಥಾನವನ್ನು ಮರಳಿ ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಡೆಸಲು ಮತ್ತು ಸಂವಿಧಾನಕ್ಕೆ ಬದ್ಧವಾಗಿರಲು ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ಒಪ್ಪಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

'ಜಮ್ಮು-ಕಾಶ್ಮೀರದಲ್ಲಿ ಜನರು, ಅದರಲ್ಲೂ ಯುವಕರು ರಾಜಕೀಯಕ್ಕೆ ಬರಬೇಕು. ಆಗ ಮಾತ್ರ ಅವರ ಆಕಾಂಕ್ಷೆಗಳು ಈಡೇರುತ್ತವೆ ಎಂದು ಅಲ್ಲಿನ ರಾಜಕೀಯ ನಾಯಕರಿಗೆ ಹೇಳಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಕ್ಷದ ನಾಯಕ ಒಮರ್ ಅಬ್ದುಲ್ಲಾ, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಮತ್ತು ತಾರಾ ಚಾಂದ್, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಬಿಜೆಪಿಯ ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾ, ಸಿಪಿಎಂನ ಮೊಹಮ್ಮದ್ ಯೂಸಫ್ ತಾರಿಗಾಮಿ, ಜೆಕೆಎಪಿ ಮುಖ್ಯಸ್ಥ ಅಲ್ತಾಫ್ ಬುಖಾರಿ, ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್, ಪ್ಯಾಂಥರ್ಸ್ ಪಾರ್ಟಿಯ ಭೀಮ್‌ ಸಿಂಗ್ ಸಭೆಯಲ್ಲಿ ಭಾಗಿಯಾಗಿದ್ದರು.

'ಅಂತರ ಕಡಿಮೆಯಾಗಬೇಕು'

ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ತರುವ ಉದ್ದೇಶದ ಗುಪ್ಕಾರ್ ಕೂಡದ ನಾಯಕರು ಸಭೆಯಲ್ಲಿ, ರಾಜ್ಯದ ಸ್ಥಾನವನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿದರು ಎಂದು ಪೀಪಲ್ಸ್ ಕಾನ್ಫರೆನ್ಸ್ ಮುಖಂಡ ಮುಜಪ್ಫರ್ ಹುಸೇನ್ ಬೇಗ್ ಮಾಹಿತಿ ನೀಡಿದ್ದಾರೆ. 'ಜಮ್ಮು-ಕಾಶ್ಮೀರವು ದೆಹಲಿಯಿಂದಲೂ ದೂರವಿದೆ ಮತ್ತು ಹೃದಯದಿಂದಲೂ ದೂರವಿದೆ ಎಂಬ ಮಾತು ಇದೆ. ಈ ದೂರವನ್ನು ಹೋಗಲಾಡಿಸಬೇಕು. ಇದಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ಬಲಗೊಳ್ಳಬೇಕು ಎಂದು ಪ್ರಧಾನಿ ಹೇಳಿದರು' ಎಂದು ಬೇಗ್ ಹೇಳಿದ್ದಾರೆ.

**********

ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಮರಳಿ ನೀಡುವ ಹಾದಿಯಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಮತ್ತು ಚುನಾವಣೆ ಮಹತ್ವದ ಮೈಲುಗಲ್ಲಾಗಿದೆ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

* ಸೂಕ್ತ ಸಮಯದಲ್ಲಿ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

-ಮುಜಪ್ಫರ್ ಹುಸೇನ್ ಬೇಗ್, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT