ಭಾನುವಾರ, ಅಕ್ಟೋಬರ್ 25, 2020
27 °C
ಪಿಎಂ ಸ್ವಾನಿಧಿ ಫಲಾನುಭವಿಗಳೊಂದಿಗೆ ಸಂವಾದದ ವೇಳೆ ಪ್ರಧಾನಿ ಮೋದಿ ಹೇಳಿಕೆ

ಬೀದಿ ಬದಿ ವ್ಯಾಪಾರಿ ತಯಾರಿಸುವ ಆಹಾರ ಡೆಲಿವರಿಗೆ ಆನ್‌ಲೈನ್‌ ವೇದಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: ದೊಡ್ಡ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಗ್ರಾಹಕರಿಗೆ ತಲುಪಿಸಲು ಚಾಲ್ತಿಯಲ್ಲಿರುವ ಆನ್‌ಲೈನ್ ಡೆಲಿವರಿ ವ್ಯವಸ್ಥೆಯಂಥ ವೇದಿಕೆಯೊಂದನ್ನು ಬೀದಿಬದಿ ಆಹಾರ ತಯಾರಿಸಿ, ಮಾರಾಟ ಮಾಡುವವರಿಗೂ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. 

ಮಧ್ಯಪ್ರದೇಶದಲ್ಲಿರುವ, ಪ್ರಧಾನ ಮಂತ್ರಿ ಬೀದಿ ಬದಿ ಪ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವಾನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸಂವಾದದ ವೇಳೆ ಅವರು ಈ ವಿಷಯ ತಿಳಿಸಿದರು.

‘ಆನ್‌ಲೈನ್‌ ಡೆಲಿವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೀದಿಬದಿ ವ್ಯಾಪಾರಿಗಳು ಮುಂದೆ ಬರಬೇಕು. ಜೊತೆಗೆ, ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡಬೇಕು. ಕೋವಿಡ್‌–19 ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನ ಆಧರಿತ ಈ ಸೌಲಭ್ಯಗಳು ಹೆಚ್ಚು ಉಪಯುಕ್ತ’ ಎಂದೂ ಹೇಳಿದರು.

‘ಬ್ಯಾಂಕ್‌ ಹಾಗೂ ಹಣಕಾಸು ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಬೀದಿ ಬದಿ ವ್ಯಾಪಾರಿಗಳು ಇರುವ ಜಾಗಕ್ಕೆ ತೆರಳಿ,  ಡಿಜಿಟಲ್‌ ಪಾವತಿಗೆ ಅಗತ್ಯವಿರುವ ಕ್ಯೂಆರ್‌ ಕೋಡ್‌ ನೀಡಿ, ಅದರ ಬಳಕೆ ಬಗ್ಗೆ ಮಾಹಿತಿಯನ್ನು ನೀಡುವರು’ ಎಂದರು.

ಕುಡಿಯುವ ನೀರು ಸಂಗ್ರಹಕ್ಕಾಗಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸುವ ಬದಲು ಗಡಿಗೆ, ಹೂಜಿಯಂತಹ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಬಳಸುವಂತೆಯೂ ಸಲಹೆ ನೀಡಿದರು.

ಇಂದೋರ್‌ ಜಿಲ್ಲೆಯ ಸಾಂವೇರ್‌ನ ಬೀದಿಬದಿ ವ್ಯಾಪಾರಿ ಛಗನ್‌ಲಾಲ್‌ ಮತ್ತು ಪತ್ನಿ, ಗ್ವಾಲಿಯರ್‌ನ ಅರ್ಚನಾ ಶರ್ಮಾ, ರೈಸೆನ್‌ ಜಿಲ್ಲೆಯ ತರಕಾರಿ ವ್ಯಾಪಾರಿ ದಲ್ಚಂದ್‌ ಅವರೊಡನೆ ಸಂವಾದ ನಡೆಸಿದರು.

ಪಿಎಂ ಸ್ವಾನಿಧಿ ಅನುಷ್ಠಾನದಲ್ಲಿ ಮಧ್ಯಪ್ರದೇಶ ಸರ್ಕಾರ ಉತ್ತಮ ಸಾಧನೆ ಮಾಡಿದೆ. ಎರಡು ತಿಂಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಈ ಯೋಜನೆ ಲಾಭ ಪಡೆದಿದ್ದಾರೆ. 4.5 ಲಕ್ಷಕ್ಕೂ ಅಧಿಕ ಜನರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದೂ ಶ್ಲಾಘಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು