ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಸಂಸ್ಕಾರಕ್ಕೆ ಪರಿಸರಸ್ನೇಹಿ ವಿಧಾನ ಬಳಸಲು ಎನ್‌ಜಿಟಿ ಸೂಚನೆ

ಕಟ್ಟಿಗೆಗಳ ಬಳಕೆಯಿಂದ ವಾಯುಮಾಲಿನ್ಯ
Last Updated 22 ಏಪ್ರಿಲ್ 2022, 15:07 IST
ಅಕ್ಷರ ಗಾತ್ರ

ನವದೆಹಲಿ: ‘ಸ್ಮಶಾನಗಳಲ್ಲಿ ಶವಸಂಸ್ಕಾರಕ್ಕೆ ಬಳಸುವ ಕಟ್ಟಿಗೆಗಳಿಂದ ಉಂಟಾಗುವ ಪರಿಸರಮಾಲಿನ್ಯವನ್ನು ತಡೆಗಟ್ಟಲು ವಿದ್ಯುತ್ ಅಥವಾ ನೈಸರ್ಗಿಕ ಅನಿಲದಂತಹ (ಪಿಎನ್‌ಜಿ) ಪರಿಸರಸ್ನೇಹಿ ವಿಧಾನ ಬಳಸಲು ಆದ್ಯತೆ ನೀಡಬೇಕು’ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ರಾಜ್ಯಗಳಿಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠವು, ‘ಧಾರ್ಮಿಕ ನಂಬಿಕೆಯ ಪ್ರಕಾರ, ಬೆಂಕಿಯಿಂದ ಶವಸಂಸ್ಕಾರ ಮಾಡುವ ವಿಧಾನವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ, ಒಂದು ಶವಸಂಸ್ಕಾರ ಮಾಡಲು ತೆರೆದ ಸ್ಥಳದಲ್ಲಿ 350ರಿಂದ 450 ಕೆ.ಜಿ. ಕಟ್ಟಿಗೆಗಳನ್ನು ಸುಡುತ್ತಿದ್ದು, ಇದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ’ ಎಂದು ಹೇಳಿದೆ.

ಉತ್ತರಪ್ರದೇಶದ ಇಂದಿರಾಪುರಂನ ಶಕ್ತಿ ಖಂಡ್ -4ರಲ್ಲಿರುವ ಸ್ಮಶಾನದಲ್ಲಿ ಶವಸಂಸ್ಕಾರದ ವೇಳೆ ಹೊರಹೊಮ್ಮುತ್ತಿರುವ ಬೂದಿ ಮತ್ತು ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಬೇಕೆಂದು ಕೋರಿ ಎನ್‌ಜಿಟಿಗೆ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಪೀಠವು, ‘ಯಾವುದೇ ಧಾರ್ಮಿಕ ನಂಬಿಕೆಯನ್ನು ನೋಯಿಸುವ ಉದ್ದೇಶವಿಲ್ಲ. ಆದರೆ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಂಬಂಧಿಸಿದ ರಾಜ್ಯಗಳ ಅಧಿಕಾರಿಗಳು ಪರಿಸರಸ್ನೇಹಿ ಶವಸಂಸ್ಕಾರದ ವಿಧಾನಗಳಿಗೆ ಜನರ ಮನವೊಲಿಸಬೇಕು’ ಎಂದೂ ತಿಳಿಸಿದೆ.

‘ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಕಟ್ಟಿಗೆ ಬಳಕೆಯ ಬದಲು ಶವಸಂಸ್ಕಾರಕ್ಕೆ ವಿದ್ಯುತ್ ಇಲ್ಲವೇ ನೈಸರ್ಗಿಕ ಅನಿಲ ಆಧಾರಿತ ತಂತ್ರಜ್ಞಾನ (ಪಿಎನ್‌ಜಿ) ವಿಧಾನಗಳನ್ನು ಬಳಸುವುದಕ್ಕೆ ಆದ್ಯತೆ ನೀಡಬೇಕು’ ಎಂದೂ ನ್ಯಾಯಪೀಠವು ರಾಜ್ಯಗಳಿಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT