ಶನಿವಾರ, ಮೇ 28, 2022
21 °C

ರಾಜಸ್ಥಾನ, ಬಂಗಾಳ, ಮಹಾರಾಷ್ಟ್ರಕ್ಕೆ ಕಲ್ಲಿದ್ದಲು ಪೂರೈಕೆ ಕುಂಠಿತ: ಕಾರಣವೇನು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್ ಕಂಪನಿಗಳು ಸುಮಾರು ₹7,918 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಂಥ ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆ ಕಡಿಮೆಯಾಗಿದೆ ಎಂದು ಸಚಿವ ಸಂಪುಟ ಕಾರ್ಯದರ್ಶಿಯವರ ಟಿಪ್ಪಣಿ ತಿಳಿಸಿದೆ.

ಕಲ್ಲಿದ್ದಲು ಕೊರತೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ.

ದೆಹಲಿ, ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳು ತಮ್ಮ ಅನಿಲ ಆಧಾರಿತ ಘಟಕಗಳಲ್ಲಿ ಮುಂಗಡವಾಗಿ ವ್ಯವಸ್ಥೆ ಮಾಡಿಕೊಂಡಿಲ್ಲ. ಇದು 4,000 ಮೆಗಾವಾಟ್ ಸಾಮರ್ಥ್ಯದ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಇದು ದೇಶೀಯ ಕಲ್ಲಿದ್ದಲು ಬೇಡಿಕೆಯ ಮೇಲಿನ ಒತ್ತಡ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ (ಸಿಇಎ) ವರದಿ ಪ್ರಕಾರ, ‘ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಸಿಂಗರೇಣಿ ಕಂಪನಿ (ಎಸ್‌ಸಿಸಿಎಲ್‌) ಜತೆ ಸಂಪರ್ಕ ಹೊಂದಿರುವ ವಿದ್ಯುತ್ ಉತ್ಪಾದನಾ ಘಟಕಗಳು ಏಪ್ರಿಲ್ 28ರಿಂದ 9 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿವೆ.

ವಿದ್ಯುತ್ ಘಟಕಗಳಿಗೆ ಇಂಧನ ಪೂರೈಕೆ ಪ್ರಮಾಣವನ್ನು 2022ರ ಏ‍ಪ್ರಿಲ್‌ನಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 15.6ರಷ್ಟು ಹೆಚ್ಚಿಸಲಾಗಿದೆ ಎಂದು ‘ಕೋಲ್ ಇಂಡಿಯಾ ಲಿಮಿಟೆಡ್’ ಇತ್ತೀಚೆಗೆ ತಿಳಿಸಿತ್ತು. ಮುಂದಿನ ತಿಂಗಳುಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿಯೂ ಕಂಪನಿ ಹೇಳಿತ್ತು.

ಏಪ್ರಿಲ್ ತಿಂಗಳ ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆ 661.64 ಲಕ್ಷ ಟನ್‌ಗೆ ತಲುಪಿದೆ. ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ಅದರ ಅಂಗಸಂಸ್ಥೆಗಳು ಸೇರಿ 534.7 ಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಿವೆ. ಸಿಂಗರೇಣಿ ಕಂಪನಿಯು 53.23 ಲಕ್ಷ ಟನ್ ಕಲ್ಲಿದ್ದಲು ಹೊರತೆಗೆದಿದೆ. ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಹಂಚಿಕೆ ಮಾಡಲಾದ ಗಣಿಗಳು (ಕ್ಯಾಪ್ಟಿವ್‌) 71.61 ಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಿವೆ ಎಂದು ಮಂಗಳವಾರ ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು