ಶನಿವಾರ, ಅಕ್ಟೋಬರ್ 24, 2020
24 °C

ಎರಡು ಗಂಟೆಯ ವಿದ್ಯುತ್‌ ವ್ಯತ್ಯಯಕ್ಕೆ ಮುಂಬೈ ಸ್ತಬ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಅನಿರೀಕ್ಷಿತವಾದ ವಿದ್ಯುತ್‌ ವ್ಯತ್ಯಯದಿಂದ ವಾಣಿಜ್ಯ ನಗರಿ ಮುಂಬೈ ಸೋಮವಾರ ಭಾಗಶಃ ಸ್ತಬ್ಧವಾಗಿತ್ತು. ಹಲವೆಡೆ ಉಪನಗರ ರೈಲುಗಳು ಮಾರ್ಗ ಮಧ್ಯೆಯೇ ಸ್ಥಗಿತವಾದರೆ, ಲಿಫ್ಟ್‌ಗಳಲ್ಲಿ ಹಲವರು ಸಿಲುಕಿಕೊಂಡರು. ವಿದ್ಯುತ್‌ ಜೊತೆಗೆ ಅಂತರ್ಜಾಲ ಸೇವೆಯೂ ಸ್ಥಗಿತಗೊಂಡ ಕಾರಣ ಮನೆಯಿಂದಲೇ ಕಚೇರಿ ಕೆಲಸದಲ್ಲಿ ತೊಡಗಿದ್ದ ಸಾವಿರಾರು ಜನರು ವಿದ್ಯುತ್‌ ವ್ಯತ್ಯಯದಿಂದ ಸಮಸ್ಯೆ ಅನುಭವಿಸಿದರು. 

ಕಲ್ವಾ, ಖಾರಾಘರ್‌, ಠಾಣೆ, ಪನ್ವೇಲ್‌, ಡೊಂಬಿವಲಿ, ಕಲ್ಯಾಣ್‌ ಸೇರಿದಂತೆ ಹಲವು ಉಪನಗರಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ವಿದ್ಯುತ್‌ ಸರಬರಾಜು ಸ್ಥಗಿತಗೊಂಡ ಎರಡು ಗಂಟೆಗಳ ಬಳಿಕ, ಮಧ್ಯಾಹ್ನ 12 ಗಂಟೆಯ ವೇಳೆಗೆ ವಿದ್ಯುತ್‌ ಸರಬರಾಜನ್ನು ಯಥಾಸ್ಥಿತಿಗೆ ತರುವ ಕೆಲಸ ನಡೆಯಿತು. ಅಗತ್ಯ ಸೇವೆಗಳ ಉದ್ಯೋಗಿಗಳಾಗಿ ಉಪನಗರ ರೈಲು ಸೇವೆ ಆರಂಭಿಸಲಾಗಿದ್ದು, ವ್ಯತ್ಯಯದ ಬಳಿಕ ಅಂದಾಜು ಎರಡೂವರೆ ಗಂಟೆಗಳ ನಂತರ ರೈಲು ಸೇವೆ ಪುನರಾರಂಭವಾಯಿತು. ಈ ವ್ಯತ್ಯಯಕ್ಕೆ ಟಾಟಾ ಪವರ್‌ ಕಾರಣ ಎಂದು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ತಿಳಿಸಿದೆ. 2018ರ ಜೂನ್‌ನಲ್ಲೂ ಇದೇ ರೀತಿ ಇಡೀ ಮಹಾನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. 

‘ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಸರಬರಾಜು ಕಂಪನಿ(ಎಂಎಸ್‌ಇಟಿಸಿಎಲ್‌) ಘಟಕದಲ್ಲಿ ನಿರ್ವಹಣೆ ಕೆಲಸದ ವೇಳೆ ಉಂಟಾದ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್‌ ಉತ್ಪಾದನೆ ಹಾಗೂ ಸರಬರಾಜು ಮಾಡುವ ಟಾಟಾ ಪವರ್‌, ಬೆಳಗ್ಗೆ 10.10ರ ವೇಳೆಗೆ ಎಂಎಸ್‌ಇಟಿಸಿಎಲ್‌ ಸಬ್‌ಸ್ಟೇಷನ್‌ಗೆ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಿದ್ದೂ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಯಿತು’ ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್‌ ರಾವುತ್‌ ತಿಳಿಸಿದರು.

ಸಮಸ್ಯೆಯ ನಡುವೆ ಹರಿದ ಹಾಸ್ಯ ಚಟಾಕಿಗಳು: ಸಮಸ್ಯೆ ನಡುವೆಯೂ ವಿದ್ಯುತ್‌ ವ್ಯತ್ಯಯದ ಕುರಿತು  ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಚಟಾಕಿಗಳನ್ನು ನಿವಾಸಿಗಳು ಹಾರಿಸಿದ್ದಾರೆ. ‘ಪವರ್‌ ಇಲ್ಲದೇ ಮುಂಬೈನಲ್ಲಿ ಯಾವುದೇ ಕೆಲಸ ಆಗಲ್ಲ. ಜೊತೆಗೆ ವಿದ್ಯುತ್‌ ಕೂಡಾ ಇಲ್ಲ’ ಎಂದು ಹಾಸ್ಯ ನಟ ವೀರ್‌ ದಾಸ್‌ ಟ್ವೀಟ್‌ ಮಾಡಿದ್ದಾರೆ. ‘ಯಾಕೆ ಎಲ್ಲರೂ ಆಶ್ಚರ್ಯವಾಗಿದ್ದೀರಿ? ಇದು 2020’ ಎಂದು ನಟ ಅಭಿಷೇಕ್‌ ಬಚ್ಚನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು