ಶನಿವಾರ, ನವೆಂಬರ್ 28, 2020
22 °C

ಕೋವಿಡ್‌–19 ದೃಢಪಟ್ಟಿದ್ದನ್ನು ಗೋಪ್ಯವಾಗಿರಿಸಿದ್ದ ಬ್ರಿಟನ್‌ ರಾಜಕುಮಾರ ವಿಲಿಯಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಯಾರಿಗೂ ಗಾಬರಿಯಾಗಬಾರದು ಎನ್ನುವ ಕಾರಣಕ್ಕೆ ಕಳೆದ ಏಪ್ರಿಲ್‌ನಲ್ಲಿ ಕೋವಿಡ್‌–19 ದೃಢಪಟ್ಟಿದ್ದರೂ, ಈ ಮಾಹಿತಿಯನ್ನು ಬ್ರಿಟನ್‌ ರಾಜಕುಮಾರ ವಿಲಿಯಂ ಅವರು ಗೋಪ್ಯವಾಗಿರಿಸಿದ್ದರು ಎಂಬ ವಿಷಯವು ಸೋಮವಾರ ಬ್ರಿಟನ್‌ನ ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿದೆ.

ಅರಮನೆಯ ವೈದ್ಯರು 38 ವರ್ಷದ ವಿಲಿಯಂ ಅವರಿಗೆ ಚಿಕಿತ್ಸೆ ನೀಡಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪೂರ್ವ ಲಂಡನ್‌ನ ನಾರ್‌ಫೋಕ್‌ನಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದರು. ಅನಾರೋಗ್ಯದ ಹೊರತಾಗಿಯೂ ಏಪ್ರಿಲ್‌ನಲ್ಲಿ ಕ್ವೀನ್ಸ್‌ ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್‌) ಕಾರ್ಯಕರ್ತರ ಜೊತೆ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಸಂವಾದ ಸೇರಿದಂತೆ 14 ಟೆಲಿಫೋನ್‌ ಹಾಗೂ ವಿಡಿಯೊ ಕಾನ್ಫರೆನ್ಸ್‌ಗಳಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. 

‘ವಿಲಿಯಂ ಅವರಿಗೆ ಕೊರೊನಾ ಸೋಂಕು ತೀವ್ರವಾಗಿ ಬಾಧಿಸಿತ್ತು. ಅವರು ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು’ ಎಂದು ಮೂಲಗಳು ‘ದಿ ಸನ್‌’ ದಿನಪತ್ರಿಕೆಗೆ ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಲು ಅರಮನೆ ಕಚೇರಿಯು ನಿರಾಕರಿಸಿದ್ದು, ಮಾಹಿತಿಯನ್ನು ಅಲ್ಲಗಳೆದಿಲ್ಲ. 

ಏಪ್ರಿಲ್‌ನಲ್ಲಿ ಬ್ರಿಟನ್‌ನಲ್ಲಿ ಕೋವಿಡ್‌–19 ಮೊದಲ ಅಲೆಯು ತೀವ್ರವಾಗಿದ್ದ ಸಂದರ್ಭದಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೂ ಕೋವಿಡ್‌–19 ದೃಢಪಟ್ಟಿತ್ತು. ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜೊತೆಗೆ ವಿಲಿಯಂ ಅವರ ತಂದೆ, ರಾಜ ಚಾರ್ಲ್ಸ್‌ ಅವರಿಗೂ ಏಪ್ರಿಲ್‌ನಲ್ಲಿ ಕೋವಿಡ್‌ ದೃಢಪಟ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು