ಗುರುವಾರ , ಜೂನ್ 30, 2022
25 °C

ಪುದುಚೇರಿ: ಸಂಪುಟ ವಿಸ್ತರಣೆಗೆ ಬಿಜೆಪಿ ಪಟ್ಟು ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಆಲ್‌ ಇಂಡಿಯಾ ಎನ್‌.ಆರ್‌ ಕಾಂಗ್ರೆಸ್‌ (ಎಐಎನ್‌ಆರ್‌ಸಿ) ಮುಖ್ಯಸ್ಥ ಎನ್‌. ರಂಗಸ್ವಾಮಿ ಅವರು ಪುದುಚೇರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳಾದರೂ ಅವರ ಸಂಪುಟ ವಿಸ್ತರಣೆಯಾಗಿಲ್ಲ. ಮಿತ್ರಪಕ್ಷ ಬಿಜೆಪಿ ಜತೆಗೆ ಉಂಟಾಗಿರುವ ಭಿನ್ನಮತವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಉಪಮುಖ್ಯಮಂತ್ರಿ ಸೇರಿದಂತೆ ಒಟ್ಟು ಮೂರು ಸಚಿವ ಸ್ಥಾನಗಳಿಗಾಗಿ ಬಿಜೆಪಿ ಪಟ್ಟು ಹಿಡಿದಿದೆ. ಸ್ಪೀಕರ್‌ ಹುದ್ದೆಯನ್ನೂ ತಮ್ಮ ಪಕ್ಷದವರಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಬಿಜೆಪಿಯ ಈ ಬೇಡಿಕೆಗೆ ಎನ್‌.ಆರ್‌. ಕಾಂಗ್ರೆಸ್‌ನ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಂಗಸ್ವಾಮಿ ಅವರು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿಯ ಜತೆಗೆ ಮಾತುಕತೆಯನ್ನೂ ನಡೆಸದೆ ಬಿಜೆಪಿಯು ವಿಧಾನಸಭೆಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿತ್ತು. ರಂಗಸ್ವಾಮಿ ಅವರ ಅಸಮಾಧಾನಕ್ಕೆ ಇದು ಕಾರಣ ಎನ್ನಲಾಗಿದೆ.

ಈಚೆಗೆ ನಡೆದ ಚುನಾವಣೆಯಲ್ಲಿ ಎಐಎನ್‌ಆರ್‌ಸಿಯು 10 ಹಾಗೂ ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಮೂವರು ಸದಸ್ಯರ ನಾಮನಿರ್ದೇಶನದಿಂದ ವಿಧಾನಸಭೆಯಲ್ಲಿ ಬಿಜೆಪಿಯ ಶಕ್ತಿಯು 9ಕ್ಕೆ ಏರಿದೆ.

‘ಬಿಜೆಪಿಗೆ ಎರಡು ಸಚಿವ ಸ್ಥಾನಗಳನ್ನು ನೀಡಲಾಗುವುದು ಮತ್ತು ಉಳಿದ ಮೂರು ಸ್ಥಾನಗಳನ್ನು ತಮ್ಮ ಪಕ್ಷದ ಸದಸ್ಯರಿಗೆ ನೀಡಲಾಗುವುದು. ಸ್ಪೀಕರ್‌ ಹುದ್ದೆಯನ್ನು ಯಾವ ಕಾರಣಕ್ಕೂ ಬಿಜೆಪಿಗೆ ಬಿಟ್ಟು ಕೊಡಲಾಗದು ಎಂದು ರಂಗಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ’ ಎಂದು ಎಐಎನ್‌ಆರ್‌ಸಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು