ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ. ಮುಂದೆ ನಾಳೆ ಹಾಜರಾಗಲಿರುವ ರಾಹುಲ್‌

Last Updated 12 ಜೂನ್ 2022, 13:37 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹಾಜರಾಗಲಿದ್ದಾರೆ. ಜೊತೆಗೆ ಈ ವಿಷಯವನ್ನು ರಾಜಕೀಯ ಸಮರವಾಗಿ ಬಿಂಬಿಸಲು, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ರಾಹುಲ್‌ ಅವರೊಂದಿಗೆ ಇ.ಡಿ ಕಚೇರಿಯವರೆಗೂ ಜಾಥಾ ಹೊರಡಲಿದ್ದಾರೆ.

ಇದೇ ವೇಳೆ, ನರೇಂದ್ರ ಮೋದಿ ಸರ್ಕಾರವು ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಎಲ್ಲ ಕಾರ್ಯಕರ್ತರು ಎಲ್ಲ ರಾಜ್ಯಗಳ ಇ.ಡಿ ಕಚೇರಿಗಳ ಮುಂದೆ ಸತ್ಯಾಗ್ರಹ ನಡೆಸಲಿದ್ದಾರೆ.

ಮೋದಿ ಪ್ರಭುತ್ವವನ್ನು ಗುರಿಯಾಗಿಸಿಕೊಂಡು, ಲಖನೌ (ಸಚಿನ್‌ ಪೈಲಟ್‌), ರಾಯಪುರ (ವಿವೇಕ್‌ ಠಂಕಾ) ಶಿಮ್ಲಾ (ಸಂಜಯ್‌ ನಿರುಪಮ್‌), ಚಂಡಿಗಡ (ರಂಜೀತ್‌ ರಂಜನ್‌), ಅಹಮದಾಬಾದ್‌ (ಪವನ್‌ ಖೇರಾ), ಡೆಹ್ರಾಡೂನ್‌ (ಅಲ್ಕಾ ನಂಬಾ) ಪ್ರದೇಶಗಳ ಪಕ್ಷದ ಪ್ರಮುಖರ ಮೂಲಕ ಕಾಂಗ್ರೆಸ್‌ ಪತ್ರಿಕಾಗೋಷ್ಠಿಯನ್ನು ನಡೆಸಿತು.

ಈ ಮೊದಲು ರಾಹುಲ್‌ ಅವರಿಗೆ ಜೂನ್‌ 2ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್‌ ನೀಡಿತ್ತು. ಆದರೆ ರಾಹುಲ್‌ ಅವರು ವಿದೇಶ ಪ್ರವಾಸದಲ್ಲಿದ್ದ ಕಾರಣ ವಿಚಾರಣೆಯ ದಿನಾಂಕವನ್ನು ಜೂನ್ 12ಕ್ಕೆ ಮುಂದೂಡಲಾಗಿತ್ತು.

ರಾಹುಲ್ ತಾಯಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 8ರಂದು ವಿಚಾರಣೆಗೆ ಹಾಜರಾಗಲು ಇ.ಡಿ ಸೂಚಿಸಿತ್ತು. ಸೋನಿಯಾ ಅವರಿಗೆ ಕೋವಿಡ್‌ ಸೋಂಕು ಧೃಡಪಟ್ಟಿದ್ದರಿಂದ ವಿಚಾರಣೆಯ ದಿನಾಂಕವನ್ನು ಜೂನ್ 23ಕ್ಕೆ ಮುಂದೂಡಲಾಗಿದೆ.

ಕಾಂಗ್ರೆಸ್‌ನ ಕಾರ್ಯಕರ್ತರು, ಪಕ್ಷದ ಹಿರಿಯ ನಾಯಕರು ಹಾಗೂ ಸಂಸದರು ಸೋಮವಾರ ಬೆಳಿಗ್ಗೆ ರಾಹುಲ್ ಗಾಂಧಿಯವರೊಂದಿಗೆ ಇ.ಡಿ ಕಚೇರಿಯವರೆಗೂ ಜಾಥಾ ನಡೆಸುವ ಮುಖಾಂತರ ರಾಹುಲ್‌ ಮತ್ತು ಪಕ್ಷವು ‘ನಾವು ಹೆದರಿಲ್ಲ ಹಾಗೂ ಹೆದರುವುದೂ ಇಲ್ಲ’ ಎಂಬ ಸಂದೇಶವನ್ನು ಆಡಳಿತರೂಢ ಪಕ್ಷಕ್ಕೆ ತಿಳಿಸಲಿದೆ.

ಕಾಂಗ್ರೆಸ್‌ ಬೆಂಬಲಿತ ಯಂಗ್‌ ಇಂಡಿಯನ್‌ ಲಿಮಿಟೆಡ್‌ ಪತ್ರಿಕೆಯಲ್ಲಿ ನಡೆದಿತ್ತು ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಇ.ಡಿ, ಪತ್ರಿಕೆಯ ಪ್ರಮುಖ ಪಾಲುದಾರರಾದ ರಾಹುಲ್‌ ಹಾಗೂ ಸೋನಿಯಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದೇ ಏಪ್ರಿಲ್‌ನಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಖಜಾಂಚಿ ಪವನ್‌ ಬನ್ಸಾಲ್‌ ಅವರನ್ನು ಇ.ಡಿ ವಿಚಾರಣೆಗೊಳಪಡಿಸಿತ್ತು.

ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆಯೊಂದು ರಾಹುಲ್‌ ಅಥವಾ ಸೋನಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಈ ಮೊದಲೇ ಕಾಂಗ್ರೆಸ್‌ ಪಕ್ಷದ ನಾಯಕರು, ‘ಇದೊಂದು ವಿಲಕ್ಷಣ ಪ್ರಕರಣ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಣ ಹೂಡದಿದ್ದರೂ ಹಣ ಅಕ್ರಮ ವರ್ಗಾವಣೆಯ ಆರೋಪವನ್ನು ಹೊರಿಸಲಾಗಿದೆ’ ಎಂದು ಹೇಳಿದ್ದರು. ಸದ್ಯ ಈ ಪ್ರಕರಣವನ್ನು ಸೇಡಿನ ರಾಜಕಾರಣ ವಿರುದ್ಧದ ರಾಜಕೀಯ ಹೋರಾಟವಾಗಿಸಲು ಕಾಂಗ್ರೆಸ್‌ ಯೋಜನೆ ಹಾಕಿದೆ.

ಈ ಕುರಿತು ಮಾತನಾಡಿರುವ ಅಹಮದಾಬಾದ್‌ನಲ್ಲಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಈ ಪ್ರಕರಣದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಆದರೂ ಕೂಡ ರಾಹುಲ್‌ ಹಾಗೂ ಸೋನಿಯಾ ಅವರಿಗೆ ಇ.ಡಿ ಸಮನ್ಸ್‌ ನೀಡಿದೆ. ಇದು ಪ್ರಚಾರಕ್ಕಾಗಿ ಮಾಡಲಾಗುತ್ತಿರುವ ಸೇಡಿನ ರಾಜಕಾರಣ. ಪ್ರಧಾನಿ ಮೋದಿಯಿಂದ ಹೇಗೆ ಪ್ರಚಾರದಲ್ಲಿರಬೇಕು ಎಂಬುದನ್ನು ನಾವು ಕಲಿಯಬೇಕು. ಯಾವುದೇ ತಪ್ಪು ಮಾಡದ ಕಾರಣ, ನಮ್ಮ ನಾಯಕರು ಇ.ಡಿ ಸಮನ್ಸ್‌ ಅನ್ನು ಗೌರವಿಸಿ, ಯಾವುದೇ ಭೀತಿಯಿಲ್ಲದೆ, ಹೆಮ್ಮೆಯಿಂದ ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದು ಹೇಳಿದರು.

‘ಬಿಜಪಿಯು ರಾಹುಲ್‌ ಗಾಂಧಿ ಅವರ ಹೆಸರನ್ನು ಹಾಳು ಮಾಡಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಿದೆ. ಇದಕ್ಕೆಲ್ಲ ರಾಹುಲ್ ತಲೆಬಾಗುವುದಿಲ್ಲ’ ಎಂದರು.

‘ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ನಡೆಸುವ ಅಸೋಸಿಯೇಟೆಡ್‌ ಜರ್ನಲ್ಸ್‌ಗೆ ಕಾಂಗ್ರೆಸ್‌ ₹90 ಕೋಟಿ ಸಾಲವನ್ನು ನೀಡಿತ್ತು. ನಂತರ ಈ ಸಾಲವನ್ನು ಲಾಭಾಂಶವನ್ನಾಗಿ ಪರಿವರ್ತಿಸಿ, ಲಾಭ ರಹಿತ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇದಕ್ಕೆ ರಾಹುಲ್‌, ಸೋನಿಯಾ ಹಾಗೂ ಇತರರನ್ನು ಸಂಸ್ಥೆಯ ಪಾಲುದಾರರನ್ನಾಗಿ ಮಾಡಲಾಯಿತು. ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಸಂಸ್ಥೆಯ ಬಗ್ಗೆ ಬರೆದಾಗ, ಸಂಸ್ಥೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಇದೊಂದು ಲಾಭರಹಿತ ಸಂಸ್ಥೆಯಾಗಿದ್ದು, ಸಂಸ್ಥೆಯ ನಿರ್ದೇಶಕರು ಯಾವುದೇ ಸಂಬಳ, ಪಾಲುದಾರಿಕೆ ಅಥವಾ ಲಾಭವನ್ನು ಹೊಂದಿಲ್ಲ’ ಎಂದು ಹೇಳಿದರು.

ಇನ್ನು ಕಾಂಗ್ರೆಸ್‌ನ ನಡಯ ಬಗ್ಗೆ ಪ್ರತಿಕ್ರಿಯಿಸಿರುವ ಸಂಬಿತ್‌ ಪಾತ್ರ, ‘ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ. ರಾಹುಲ್‌ ಸೋಮವಾರ ಇ.ಡಿ ವಿಚಾರಣೆಗೆ ಹಾಜರಾಗಬೇಕಿದೆ. ಆದರೆ ಕಾಂಗ್ರೆಸ್‌ ದೇಶದಲ್ಲಿರೋ ಎಲ್ಲ ನಾಯಕರನ್ನು ದೆಹಲಿಗೆ ಕರೆಸುತ್ತಿದೆ. ಇದರಿಂದ ಏನು ಉಪಯೋಗ?’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT