ಬುಧವಾರ, ಸೆಪ್ಟೆಂಬರ್ 29, 2021
21 °C

ವಿರೋಧ ಪಕ್ಷಗಳ ಒಗ್ಗೂಡಿಸಲು ರಾಹುಲ್‌ ಅವರು ಪವಾರ್‌ ಜತೆ ಕೈಜೋಡಿಸಬೇಕು: ಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೇಂದ್ರದಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರೊಂದಿಗೆ ಕೈಜೋಡಿಸಬೇಕು. ಈ ಮೂಲಕ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶಿವಸೇನೆ ಗುರುವಾರ ಆಗ್ರಹಿಸಿದೆ.

ರಾಹುಲ್‌ ಗಾಂಧಿ ಅವರು, ಕೇಂದ್ರ ಮತ್ತು ಅದರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ, ಅದರೆ ಅದು ಟ್ವಿಟರ್‌ನಲ್ಲಿ ಮಾತ್ರ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ತಿಳಿಸಿದೆ.

‘ಪ್ರಧಾನಿ ನರೇಂದ್ರ ಮೋದಿಯವರ ದೇಹ ಭಾಷೆಯೇ ಇತ್ತೀಚೆಗೆ ಬದಲಾಗಿದೆ. ದೇಶದ ಪರಿಸ್ಥಿತಿ ತನ್ನ ಕೈಮೀರಿ ಹೋಗಿದೆ ಎಂಬುದರ ಅರಿವು ಅವರಿಗೆ ಆಗಿದೆ. ಆದರೆ ಜನರ ಕೋಪದ ಹೊರತಾಗಿಯೂ, ದುರ್ಬಲ ಮತ್ತು ಭಿನ್ನಾಭಿಪ್ರಾಯಗಳಿರುವ ವಿರೋಧ ಪಕ್ಷಗಳಿಂದ ತಮಗೆ ಯಾವುದೇ ಸಂಕಟ ಬರುವುದಿಲ್ಲ ಎಂಬ ವಿಶ್ವಾಸವನ್ನು ಬಿಜೆಪಿ ಮತ್ತು ಸರ್ಕಾರ ಹೊಂದಿದೆ’ ಎಂದು ಸಾಮ್ನಾ ಹೇಳಿದೆ.

ಶರದ್‌ ಪವಾರ್‌ ಅವರು ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಎಡಪಂಥೀಯರು ಸೇರಿದಂತೆ ಎಂಟು ವಿರೋಧ ಪಕ್ಷಗಳ ನಾಯಕರ ಸಭೆಯನ್ನು ದೆಹಲಿಯ ತಮ್ಮ ನಿವಾಸದಲ್ಲಿ ನಡೆಸಿದ್ದರು. ಬಿಜೆಪಿ ವಿರುದ್ಧ ತೃತೀಯ ರಂಗ ಸ್ಥಾಪಿಸುವ ಉದ್ದೇಶ ಇದರ ಹಿಂದಿದೆ ಎನ್ನಲಾಗಿದೆ.

ಆ ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ್ದ ನಾಯಕರು ಇದನ್ನು ‘ರಾಷ್ಟ್ರೀಯ ಮಂಚ್’ನ ಸಮಾನ ಮನಸ್ಕ ವ್ಯಕ್ತಿಗಳ ‘ರಾಜಕೀಯೇತರ’ ಸಭೆ ಎಂದು ಪ್ರತಿಪಾದಿಸಿದರು. ರಾಷ್ಟ್ರೀಯ ಮಂಚ್‌ನ ಪರಿಕಲ್ಪನೆಯು ಟಿಎಂಸಿ ಉಪಾಧ್ಯಕ್ಷರಾಗಿರುವ ಯಶ್ವಂತ್‌ ಸಿನ್ಹಾ ಅವರದ್ದು ಎನ್ನಲಾಗಿದೆ.

ರಾಹುಲ್‌ ಗಾಂಧಿ ಅವರು ಎಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿರುವ ಸೇನಾ, ಶರದ್ ಪವಾರ್ ಅವರು ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಬಹುದು. ಆದರೆ, ನಾಯಕತ್ವದ ಪ್ರಶ್ನೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವ ವಹಿಸುತ್ತದೆ ಎಂದು ನಿರೀಕ್ಷಿಸಿದರೆ, ಅದು ರಾಷ್ಟ್ರೀಯ ಅಧ್ಯಕ್ಷರಿಲ್ಲದ ಪಕ್ಷವಾಗಿದೆ ಎಂದು ಸೇನಾ ಹೇಳಿದೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಎಂಬುದೇನೋ ಇದೆ. ಆದರೆ ಅದು ದೇಶದಲ್ಲಿ ಬಲವಾದ ಮತ್ತು ಸಂಘಟಿತ ವಿರೋಧ ಪಕ್ಷವಾಗಿದೆಯೇ ಎಂಬ ಪ್ರಶ್ನೆ ಇದೆ ಎಂದು ಸೇನಾ ಕೇಳಿದೆ.

ಶರದ್ ಪವಾರ್ ಅವರ ದೆಹಲಿ ನಿವಾಸದಲ್ಲಿ ಎರಡೂವರೆ ಗಂಟೆಗಳವರೆಗೆ ನಡೆದ ರಾಷ್ಟ್ರೀಯ ಮಂಚ್‌ನ ಸಭೆಯು ಪ್ರತಿಪಕ್ಷಗಳ ಸ್ಥಿತಿಯನ್ನು ತೋರಿಸಿಕೊಟ್ಟಿದೆ ಎಂದು ಅದು ವ್ಯಂಗ್ಯವಾಡಿದೆ.

‘ಬಿಜೆಪಿ ಮತ್ತು ಮೋದಿಯವರನ್ನು ವಿರೋಧಿಸುವ ಏಕೈಕ ಮಾನದಂಡದ ಮೇಲೆ ಪ್ರತಿಪಕ್ಷಗಳು ಒಗ್ಗೂಡಬೇಕೇ ಎಂಬ ಬಗ್ಗೆ ಮೊದಲು ಚರ್ಚೆಯಾಗಬೇಕು. ಇಂದು ದೇಶ ಎದುರಿಸುತ್ತಿರುವ ನಾನಾ ಸವಾಲುಗಳ ಬಗ್ಗೆ ಪರ್ಯಾಯ ನಾಯಕತ್ವ ಏನು ಯೋಚಿಸುತ್ತದೆ?’ ಎಂದು ಸೇನಾ ಪ್ರಶ್ನಿಸಿದೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಬಲವಾದ ವಿರೋಧ ಪಕ್ಷದ ಅಗತ್ಯವಿದೆ. ಆದರೆ ಅಂಥ ವಿರೋಧ ಪಕ್ಷ ರಾಷ್ಟ್ರಮಟ್ಟದಲ್ಲಿ ಅಸ್ತಿತ್ವದಲ್ಲಿಲ್ಲ. ಹಲವಾರು ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧ ಸೆಟೆದು ನಿಂತು ಚುನಾವಣೆಗಳಲ್ಲಿ ಆ ಪಕ್ಷವನ್ನು ಸೋಲಿಸಿವೆ ಎಂದು ಸಾಮ್ನಾ ಹೇಳಿದೆ.

ಇದನ್ನೂ ಓದಿ... ಮಾನಹಾನಿ ಪ್ರಕರಣ: ಸೂರತ್‌ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು