ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರೋಶದಿಂದ ಕೇಳಿ ಮಹಿಳಾ ಮೀಸಲು: ಸಿಜೆಐ ರಮಣ ಒತ್ತಾಯ

ಸಿಜೆಐ ರಮಣ ಒತ್ತಾಯ
Last Updated 26 ಸೆಪ್ಟೆಂಬರ್ 2021, 18:32 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರಿಗೆ ನ್ಯಾಯಾಂಗದಲ್ಲಿ ಶೇ 50ರಷ್ಟು ಮೀಸಲಾತಿ ನೀಡುವುದರ ಪರವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಮಾತನಾಡಿದ್ದಾರೆ. ಇದು ದಾನ ಅಲ್ಲ, ಮಹಿಳೆಯರ ಹಕ್ಕು ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ನೇಮಕವಾದ ಒಂಬತ್ತು ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ ವಕೀಲೆಯರ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ನೇಮಕವಾದ ಒಂಬತ್ತು ನ್ಯಾಯಮೂರ್ತಿಗಳಲ್ಲಿ ಮೂವರು ಮಹಿಳೆಯರೂ ಇದ್ದಾರೆ.

‘ಜಗತ್ತಿನ ಮಹಿಳೆಯರೇ ಒಗ್ಗಟ್ಟಾಗಿ. ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿದರೆ ನೀವು ಕಳೆದುಕೊಳ್ಳಲು ಏನೂ ಇಲ್ಲ’ ಎಂದು ಕಾರ್ಲ್‌ ಮಾರ್ಕ್ಸ್‌ ಅವರ ಮಾತನ್ನು ಸ್ವಲ್ಪ ಬದಲಾಯಿಸಿ ಹೇಳಿದರು. ‘ಜಗತ್ತಿನ ಕಾರ್ಮಿಕರೆಲ್ಲ ಒಗ್ಗಟ್ಟಾಗಿ...’ ಎಂಬುದು ಕಾರ್ಲ್‌ ಮಾರ್ಕ್ಸ್‌ ಅವರ ಪ್ರಸಿದ್ಧ ಹೇಳಿಕೆ.

ಮಹಿಳಾ ನ್ಯಾಯಾಧೀಶರು ಮತ್ತು ವಕೀಲರ ಸಂಖ್ಯೆ ಹೆಚ್ಚುವುದರೊಂದಿಗೆ ನ್ಯಾಯದಾನದ ಗುಣಮಟ್ಟ ಉತ್ತಮಗೊಳ್ಳುತ್ತದೆ. ಹಾಗಾಗಿ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಬೇಕಾದ ಬದಲಾವಣೆಗಳನ್ನು ತುರ್ತಾಗಿ ಮಾಡಬೇಕಾಗಿದೆ. ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರವೇಶದಲ್ಲಿ ಮಹಿಳೆಯರಿಗೆ ಗಣನೀಯ ಪ್ರಮಾಣದ ಮೀಸಲಾತಿ ನೀಡಬೇಕು. ನ್ಯಾಯಾಂಗ ಶಿಕ್ಷಣದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಬೇಕು ಎಂದು ರಮಣ ಪ್ರತಿಪಾದಿಸಿದ್ದಾರೆ.

‘ಮಹಿಳೆಯರು ನ್ಯಾಯಾಂಗ ಕ್ಷೇತ್ರಕ್ಕೆ ಬರಲು ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸಬೇಕು. ಮೂಲಸೌಕರ್ಯವೂ ಸೇರಿ ಎಲ್ಲವೂ ಪೂರಕವಾಗಿರಬೇಕು. ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಕಾರ್ಯಾಂಗದ ಮೇಲೆಯೂ ಒತ್ತಡ ಹಾಕುತ್ತಿದ್ದೇನೆ’ ಎಂದು ಅವರು ವಿವರಿಸಿದರು.

ಮಹಿಳೆಯರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮುಖ್ಯ ನ್ಯಾಯಮೂರ್ತಿ ಉಲ್ಲೇಖಿಸಿದರು. ಲಿಂಗತ್ವ ಸಿದ್ಧಮಾದರಿಗಳಿಂದಾಗಿ ಕುಟುಂಬದ ಹೊರೆ ಅವರ ಮೇಲೆ ಬೀಳುತ್ತದೆ. ಕಕ್ಷಿದಾರರು ಪುರುಷ ವಕೀಲರಿಗೆ ಆದ್ಯತೆ ಕೊಡುತ್ತಾರೆ. ನ್ಯಾಯಾಲಯದ ಸಭಾಂಗಣಗಳು ಮಹಿಳೆಯರಿಗೆ ಅನುಕೂಲಕರ ವಾತಾವರಣ ಹೊಂದಿರುವುದಿಲ್ಲ, ಅವು ಕಿಕ್ಕಿರಿದು ತುಂಬಿರುತ್ತವೆ. ಮೂಲಸೌಕರ್ಯ ಇರುವುದಿಲ್ಲ. ಮಹಿಳೆಯರಿಗೆ ಸರಿಯಾದ ಶೌಚಾಲಯಗಳು ಕೂಡ ಇರುವುದಿಲ್ಲ. ಹಾಗಾಗಿ, ಈ ವೃತ್ತಿಗೆ ಬರವುದಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಾರೆ ಎಂದು ಅವರು ಹೇಳಿದರು.

ಪ್ರಾತಿನಿಧ್ಯ ಅತ್ಯಲ್ಪ‍

ನ್ಯಾಯಾಂಗ ವ್ಯವಸ್ಥೆಯ ಕೆಳ ಹಂತಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಸುಮಾರು ಶೇ 30ರಷ್ಟಿದೆ. ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳ ಪ್ರಮಾಣ ಶೇ 11.5ರಷ್ಟು ಮಾತ್ರ ಇದೆ. ಸುಪ್ರೀಂ ಕೋರ್ಟ್‌ನ 33 ನ್ಯಾಯಮೂರ್ತಿಗಳ ಪೈಕಿ ಮಹಿಳೆಯರ ಸಂಖ್ಯೆ ನಾಲ್ಕು ಮಾತ್ರ. ಇದು ಶೇ 12ರಷ್ಟು ಮಾತ್ರ.

ದೇಶದಲ್ಲಿ 17 ಲಕ್ಷ ವಕೀಲರಿದ್ದಾರೆ. ಅದರಲ್ಲಿ ಮಹಿಳೆಯರ ಪ್ರಮಾಣವು ಶೇ 15ರಷ್ಟು ಇದೆ. ರಾಜ್ಯಗಳ ವಕೀಲರ ಸಂಘಗಳಿಗೆ ಚುನಾಯಿತರಾದ ಪ್ರತಿನಿಧಿಗಳಲ್ಲಿ ಮಹಿಳೆಯರ ಪ್ರಮಾಣವು ಶೇ 2ರಷ್ಟು ಮಾತ್ರ ಇದೆ. ಭಾರತೀಯ ವಕೀಲರ ಸಂಘದ ರಾಷ್ಟ್ರೀಯ ಸಮಿತಿಯಲ್ಲಿ ಮಹಿಳಾ ಸದಸ್ಯರೇ ಇಲ್ಲ ಎಂಬುದರತ್ತ ರಮಣ ಬೊಟ್ಟು ಮಾಡಿ ತೋರಿಸಿದರು.

ಆರು ಸಾವಿರ ವಿಚಾರಣಾ ನ್ಯಾಯಾಂಗ ಸಂಕೀರ್ಣಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಶೇ 22ರಷ್ಟು ನ್ಯಾಯಾಲಯ ಸಂಕೀರ್ಣಗಳಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದರು.

***

ಆಕ್ರೋಶದಿಂದ ಕೂಗಿ ನಿಮ್ಮ ಆಗ್ರಹವನ್ನು ಹೇಳಿ. ಸಾವಿರಾರು ವರ್ಷಗಳ ದಮನ ನೀತಿ ಸಾಕು. ನ್ಯಾಯಾಂಗದಲ್ಲಿ ಶೇ 50ರಷ್ಟು ಮಹಿಳಾ ಪ್ರಾತಿನಿಧ್ಯಕ್ಕೆ ಇದು ಸಕಾಲ
– ಎನ್.ವಿ. ರಮಣ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT