ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್ ಚಾಲೀಸಾ ವಿವಾದ: ಪಕ್ಷೇತರ ಶಾಸಕ ರವಿ ರಾಣಾ, ಸಂಸದೆ ನವನೀತ್‌ ರಾಣಾ ಬಂಧನ

ಶಿವಸೇನಾ ಕಾರ್ಯಕರ್ತರಿಂದ ಪ್ರತಿಭಟನೆ, ಹನುಮಾನ್‌ ಚಾಲೀಸಾ ಪಠಿಸುವ ನಿರ್ಧಾರ ಕೈಬಿಟ್ಟ ದಂಪತಿ
Last Updated 23 ಏಪ್ರಿಲ್ 2022, 13:57 IST
ಅಕ್ಷರ ಗಾತ್ರ

ಮುಂಬೈ: ಬಾಂದ್ರಾದಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರನ್ನು ಖಾರ್‌ ಉಪನಗರ ಠಾಣೆ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.

ವಿವಿಧ ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಣಾ ದಂಪತಿಯನ್ನು ಇಲ್ಲಿನ ಖಾರ್‌ ಉಪನಗರದಲ್ಲಿರುವ ಅವರ ನಿವಾಸದಿಂದ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದ ಪೊಲೀಸರು, ಸಂಜೆ ಬಂಧಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವ ನಿರ್ಧಾರವನ್ನು ರಾಣಾ ದಂಪತಿ ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ.

ಬಂಧನಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ರಾಣಾ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ತಮ್ಮ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಹೇಳಿದ್ದರು.

ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆಶನಿವಾರ ಬೆಳಗ್ಗೆ 9ಕ್ಕೆ ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಶುಕ್ರವಾರ ಹೇಳಿದ್ದರು. ರಾಣಾ ದಂಪತಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಬೆಳಗ್ಗೆಯಿಂದಲೇ ‘ಮಾತೋಶ್ರೀ’ ಬಳಿ ಜಮಾಯಿಸಿದ್ದರು. ಮತ್ತೊಂದು ಗುಂಪು ರಾಣಾ ದಂಪತಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿತ್ತು.

ಪ್ರತಿಭಟನೆ:ಶಿವಸೇನಾ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಮಹಾರಾಷ್ಟ್ರ ಶಾಸಕ ರವಿ ರಾಣಾ ಅವರ ನಿವಾಸಕ್ಕೆ ನುಗ್ಗಲು ಶನಿವಾರ ಯತ್ನಿಸಿದ್ದಾರೆ. ಆದರೆ, ಪೊಲೀಸರು ಶಿವಸೇನಾ ಕಾರ್ಯಕರ್ತರನ್ನು ತಡೆದು, ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾರ್‌ ಉಪನಗರದಲ್ಲಿರುವ ರಾಣಾ ದಂಪತಿ ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಶಿವಸೇನಾ ಕಾರ್ಯಕರ್ತರು ಜಮಾವಣೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಮನೆಯಿಂದ ಹೊರಗೆ ಬರದಂತೆ ರಾಣಾ ದಂಪತಿಗೆ ಪೊಲೀಸರು ಸೂಚನೆ ನೀಡಿದರು ಎಂದೂ ಅಧಿಕಾರಿಗಳು ಹೇಳಿದ್ದಾರೆ.

ರವಿ ರಾಣಾ ಅವರು ಬಡ್ನೇರಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದರೆ, ಪತ್ನಿ ನವನೀತ್‌ ರಾಣಾ ಅವರು ಅಮರಾವತಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಸಂಸದೆ.

‘ಉದ್ರಿಕ್ತ ಕಾರ್ಯಕರ್ತರು ಬೆಳಿಗ್ಗೆ 8.45ರ ಸುಮಾರಿಗೆ ರಾಣಾ ದಂಪತಿಯ ಅಪಾರ್ಟ್‌ಮೆಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿದರು. ಘೋಷಣೆಗಳನ್ನು ಕೂಗುತ್ತಾ ಅಪಾರ್ಟ್‌ಮೆಂಟ್ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ, ‘ಸಿಎಂ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾದರೆ ರಾಣಾ ದಂಪತಿಗೆ ‘ಪ್ರಸಾದ’ ಕೊಡದೇ ಕಳುಹಿಸುವುದಿಲ್ಲ’ ಎಂದು ಶಿವಸೇನಾ ಕಾರ್ಯಕರ್ತರು ಮತ್ತು ಮುಖಂಡರು ಎಚ್ಚರಿಕೆ ನೀಡಿದ್ದರು.

‘ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರವು ನಿಭಾಯಿಸಲು ಸಾಧ್ಯವಾಗದ ಸಂದರ್ಭಗಳನ್ನು ಬಿಜೆಪಿ ಪ್ರಾಯೋಜಿತ ಎಂದು ಹೇಳುವ ಮೂಲಕ ತನ್ನ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ’ ಎಂದು ಬಿಜೆಪಿ ನಾಯಕ ಬಿಜೆಪಿ ದೇವೇಂದ್ರ ಫಡಣವೀಸ್‌ ನಾಗಪುರದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT