ಶನಿವಾರ, ಅಕ್ಟೋಬರ್ 16, 2021
29 °C
ನವರಾತ್ರಿಯ ಮೊದಲ ದಿನ ಕುಟುಂಬ ಸಮೇತ ಮುಖ್ಯಮಂತ್ರಿ ಠಾಕ್ರೆ ದೇವಿಯ ಆಲಯಕ್ಕೆ ಭೇಟಿ

ಮಹಾರಾಷ್ಟ್ರ: ಧಾರ್ಮಿಕ ಸ್ಥಳಗಳು ಭಕ್ತರಿಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ಕೋವಿಡ್‌ ಸಾಂಕ್ರಾಮಿಕದಿಂದ ಆರು ತಿಂಗಳಿಂದ ಕದ ಮುಚ್ಚಿದ್ದ ರಾಜ್ಯದ ಧಾರ್ಮಿಕ ಕೇಂದ್ರಗಳು ಗುರುವಾರ ಪುನಃ ತೆರೆದಿವೆ. ಮುಂಜಾನೆಯಿಂದಲೇ ಮುಂಬೈ ಮತ್ತು ಇತರ ಸ್ಥಳಗಳಲ್ಲಿನ ವಿವಿಧ ದೇವಾಲಯಗಳು ಮತ್ತು ಮಸೀದಿಗಳಿಗೆ ಭಕ್ತರು ಭೇಟಿ ನೀಡಿದರು. 

ನವರಾತ್ರಿ ಹಬ್ಬದ ಅಂಗವಾಗಿ ದೇವಾಲಯಗಳನ್ನು ಮತ್ತೆ ತೆರೆಯಲಾಗಿದೆ. ಒಂಬತ್ತು ದಿನಗಳ ಹಬ್ಬದ ಮೊದಲನೇ ದಿನವಾದ ಗುರುವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಪತ್ನಿ ರಶ್ಮಿ ಠಾಕ್ರೆ ಮತ್ತು ಇಬ್ಬರು ಪುತ್ರರಾದ ಆದಿತ್ಯ ಮತ್ತು ತೇಜಸ್‌ ಅವರೊಂದಿಗೆ ಮುಂಬಾ ದೇವಿಯ ಆಲಯಕ್ಕೆ ಬೆಳಿಗ್ಗೆ 8.45ರ ಸುಮಾರಿಗೆ ಭೇಟಿ ನೀಡಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. 

ಬೆಳಿಗ್ಗೆಯಿಂದೂ ಭಕ್ತರು ಮುಖಗವುಸು ಧರಿಸಿ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುತ್ತಾ ಮುಂಬೈನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಕಂಡುಬಂತು. ನಗರದ ಮಸೀದಿಗಳೂ ಸಹ ಬೆಳಿಗ್ಗೆಯಿಂದ ಭಕ್ತರ ನಿರಂತರ ಹರಿವಿಗೆ ಸಾಕ್ಷಿಯಾದವು. 

‘ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಾರ್ಥನಾ ಸ್ಥಳಗಳಲ್ಲಿ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಕೋವಿಡ್‌ ಮೊದಲನೇ ಅಲೆ ಕ್ಷೀಣಿಸಿದ ನಂತರ ಕಳೆದ ವರ್ಷದ ನವೆಂಬರ್‌ನಲ್ಲಿ ಮಹಾರಾಷ್ಟ್ರದ ಧಾರ್ಮಿಕ ಸ್ಥಳಗಳನ್ನು ತೆರೆಯಲಾಗಿತ್ತು. ಆದರೆ ಈ ವರ್ಷದ ಮಾರ್ಚ್‌ನಲ್ಲಿ ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಆರಂಭವಾದ ನಂತರ ಮತ್ತೆ ಧಾರ್ಮಿಕ ಸ್ಥಳಗಳು ಬಾಗಿಲು ಮುಚ್ಚಿದ್ದವು.  

ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಬಿಜೆಪಿ ನಾಯಕ ರಾಮ್ ಕದಮ್ ಕೂಡ ಮುಂಬಾ ದೇವಿ ದೇವಸ್ಥಾನಕ್ಕೆ ಮಧ್ಯಾಹ್ನ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.